
ಮಡಿಕೇರಿ ಮೇ 23 NEWS DESK : ಭಾರತದ ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ನಡೆಸಿದ ಪೈಶಾಚಿಕ ಕೃತ್ಯದಿಂದ ಅಮಾಯಕ ಮಹಿಳೆಯರ ಸಿಂಧೂರ ಅಳಿಸಿ ಹೋದುದಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ನಡೆಸಿದ ‘ಆಪರೇಷನ್ ಸಿಂಧೂರ’ದ ಯಶಸ್ಸಿನ ಹಿನ್ನೆಲೆ ಸಿಂಧೂರ ವಿಜಯೋತ್ಸವ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ‘ಸಿಂಧೂರ ವಿಜಯೋತ್ಸವ’ ನಡೆಯುತ್ತಿದ್ದು, ಇದರ ಭಾಗವಾಗಿ ನಗರದಲ್ಲಿ ತಿರಂಗಾ ಯಾತ್ರೆ ನಡೆಯಿತು. ನಗರದ ಎವಿ ಶಾಲೆಯ ಬಳಿಯ ಬನ್ನಿ ಮಂಟಪದಿಂದ ಗಾಂಧಿ ಮೈದಾನದವರೆಗೆ ನಡೆದ ಯಾತ್ರೆಯಲ್ಲಿ ಜಿಲ್ಲಾ ವ್ಯಾಪ್ತಿಯ ಸಹಸ್ರಾರು ದೇಶ ಪ್ರೇಮಿಗಳು, ಮಹಿಳೆಯರು,ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರುಗಳು ರಾಷ್ಟ್ರ ಧ್ವಜ ಹಿಡಿದು ಪಕ್ಷ ಬೇಧ ಮರೆತು ಮೆರವಣಿಗೆ ನಡೆಸಿದರು. ಸೈನ್ಯಾಧಿಕಾರಿಗಳು, ಸೈನಿಕರು ತಮ್ಮ ಸಮವಸ್ತ್ರಗಳೊಂದಿಗೆ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.










