
ವಿರಾಜಪೇಟೆ ಮೇ 24 NEWS DESK : ಅಮ್ಮತ್ತಿಯ ಸಂತ ಅಂತೋಣಿ ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ರೆ.ಫಾ. ಮದಲೈ ಮುತ್ತು ರೆ. ಫಾ. ರೈಮಂಡ್ ಅವರಿಂದ ಅಧಿಕಾರ ಸ್ವೀಕರಿಸಿದರು. ವಿರಾಜಪೇಟೆ ವಲಯದ ಶ್ರೇಷ್ಠ ಗುರುಗಳು ಹಾಗೂ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ಅಧಿಕಾರ ಸ್ವೀಕಾರದ ಧಾರ್ಮಿಕ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಅಮ್ಮತ್ತಿ ಚರ್ಚ್ ನ ಕನ್ಯಾ ಸ್ತ್ರೀಯರು, ಪಾಲನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು. ರೆ.ಫಾ.ಮದಲೈ ಮುತ್ತು ಕಳೆದ 22 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿಯೇ ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಜನಾನುರಾಗಿರುತ್ತಾರೆ. ಪ್ರಸ್ತುತ ಅಮ್ಮತ್ತಿ ಧರ್ಮ ಕೇಂದ್ರದ ಗುರುಗಳಾಗಿ, ವಿರಾಜಪೇಟೆ ಸಂತ ಅನ್ನಮ್ಮ ಪಿ.ಯು.ಕಾಲೇಜಿನ ಪ್ರಾಂಶುಪಾಲರಾಗಿ, ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಈ ಹಿಂದೆ ಕೊಡಗು ವಲಯದ ಶ್ರೇಷ್ಠ ಗುರುಗಳಾಗಿ, ಎಂಡಿಇಎಸ್ ಶಿಕ್ಷಣ ಸಂಸ್ಥೆಗಳ ಖಜಾಂಚಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವಾಗುತ್ತಿರುವುದು ಗಮನಾರ್ಹ.









