
ಕುಶಾಲನಗರ ಮೇ 27 NEWS DESK : ಸಿಇಟಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ 875ನೇ ಸ್ಥಾನ ಗಳಿಸಿದ ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ ಕೌಶಿಕ್ ಅವರನ್ನು ವಿದ್ಯಾಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಯ ಪೋಷಕರೊಂದಿಗೆ ಸಾಧಕ ವಿದ್ಯಾರ್ಥಿಯನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಎನ್.ಶಂಭುಲಿಂಗಪ್ಪ ಮತ್ತು ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲ ಕ್ಲಾರಾ ರೇಷ್ಮಾ ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಿದರು. ವಿವೇಕಾನಂದ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಈ ಸಾಲಿನ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದಿರುವ ಕೌಶಿಕ್ ಉತ್ತಮ ಸಾಧನೆ ಗಳಿಸಿರುವ ಬಗ್ಗೆ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗಪ್ಪ ಸಂತಸ ವ್ಯಕ್ತಪಡಿಸಿ ಶುಭ ಕೋರಿದರು. ಉನ್ನತ ವ್ಯಾಸಂಗಕ್ಕೆ ಸಂಸ್ಥೆಯ ಮೂಲಕ ಸಹಾಯ ಹಸ್ತ ನೀಡುವ ಭರವಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ಕೌಶಿಕ್ ಮಾತನಾಡಿ ತಾನು ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ಮಟ್ಟದ ಶಿಕ್ಷಣ ಪಡೆಯುವ ಗುರಿ ಹೊಂದಿರುವುದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಮಹೇಶ್ ಅಮೀನ್, ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ ಎ ಲಿಖಿತ, ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ ಕೌಶಿಕ್ ಪೋಷಕರು ಇದ್ದರು. ಕೌಶಿಕ್ ಕುಶಾಲನಗರ ಗೊಂದಿ ಬಸವನಹಳ್ಳಿಯ ನಿವಾಸಿ ಆಟೋ ಚಾಲಕ ಗಂಗರಾಜು ಮತ್ತು ಲತಾ ಮಣಿ ದಂಪತಿಯ ಪುತ್ರ.









