
ಮಡಿಕೇರಿ NEWS DESK ಮೇ 27 : ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ಬಿದ್ದು ಹಾನಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ವಿದ್ಯುತ್ ಮಾರ್ಗದ ನಿರ್ವಹಣೆಗಾಗಿ ಹೆಚ್ಚುವರಿ ಲೈನ್ ಮೆನ್ ಗಳನ್ನು ನಿಯೋಜಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ 600 ಕ್ಕೂ ಅಧಿಕ ವಿದ್ಯುತ್ ಕಂಬಗಳು ಬಿದ್ದು ಹಾನಿ ಉಂಟಾಗಿದೆ. ಅಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ. ಚೆಸ್ಕಾಂ ನಲ್ಲಿ ಸಿಬ್ಬಂದಿಗಳ ಕೊರತೆ ಇರುವುದನ್ನು ಮನಗಂಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಶಕರಾದ ಎ.ಎಸ್.ಪೊನ್ನಣ್ಣ ಅವರು ಲೈನ್ ಮೆನ್ ಗಳ ನಿಯೋಜನೆಗೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎರ್.ಮುನಿಗೋಪಾಲ ರಾಜು ಅವರ ಬಳಿ ಕೋರಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಚೆಸ್ಕಾಂ ಎಂಡಿ ಸುಮಾರು 74 ಹೆಚ್ಚುವರಿ ಲೈನ್ ಮೆನ್ ಗಳನ್ನು ಕೊಡಗು ಜಿಲ್ಲೆಗೆ ನಿಯೋಜನೆ ಮಾಡಿದ್ದಾರೆ. ಮಂಡ್ಯ, ಚಾಮರಾಜನಗರ, ಮೈಸೂರು ಮತ್ತು ಹಾಸನದ ಲೈನ್‌ಮೆನ್‌ಗಳನ್ನು ನಿಯೋಜಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಗಾಳಿ, ಮಳೆಯಿಂದ ಜಿಲ್ಲೆಯ ವಿದ್ಯುತ್ ಮಾರ್ಗದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಹೆಚ್ಚುವರಿ ಸಿಬ್ಬಂದಿಗಳು ಶೀಘ್ರ ಬಗೆಹರಿಸಲಿದ್ದಾರೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.










