
ಸುಂಟಿಕೊಪ್ಪ ಮೇ 28 NEWS DESK : ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದು ಅಲ್ಲಲ್ಲಿ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಾಯುಭಾರ ಕುಸಿತ ಮತ್ತು ಮುಂಗಾರು ಮಳೆಯಿಂದ ಈ ಭಾಗದ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹಾನಿಯಾದ ಹಿನ್ನಲೆ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಸಮೀಪದ ಮಾದಾಪುರ ರಸ್ತೆಯ ಸ್ವಸ್ಥ ವಿಶೇಷ ಶಾಲೆಯ ಬಳಿ ಬೃಹದಾರಕಾರದ ಮರ ಬಿದ್ದು ವಾಹನ ಹಾಗೂ ಜನಸಂಚಾರಕ್ಕೆಕೆಲಕಾಲ ಅಡ್ಡಿಯಾಗಿತ್ತು.
ಸಮೀಪದ ನಾಕೂರು ಶಿರಂಗಾಲ ಗ್ರಾಮದಲ್ಲೂ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಜನ ಸಂಕಷ್ಠ ಎದುರಿಸಬೇಕಾಯಿತು. ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕಪ್ಪಳಿಸಿ ಆ ಭಾಗದಲ್ಲಿ ಬೆಳಿಗ್ಗೆಯಿಂದಲೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸಮೀಪದ ಮಾದಾಪುರ- ಕುಂಬೂರು ಮಾರ್ಗ ಮದ್ಯೆ ಅಲ್ಲಲ್ಲಿ ಮರಗಳು ಬಿದ್ದು ಬಹಳಷ್ಟು ತೊಂದರೆ ಅನುಭವಿಸುವಂತಾಯಿತು. ಸಮೀಪದ ಕೆದಕಲ್ ಗ್ರಾಮದ ಹೊರೂರು ಗ್ರಾಮದಲ್ಲಿ ಮರವೊಂದು ಬಿದ್ದು ಅಡ್ಡಿಯಾಗಿತ್ತು. ಒಟ್ಟಾರೆಯಾಗಿ ಈ ವರ್ಷದ ಮಳೆಯು ಅನೇಕ ಅವಾಂತರಗಳನ್ನು ಸೃಷ್ಡಿಸಿತು.










