
ಮಡಿಕೇರಿ ಮೇ 29 NEWS DESK : ಕಳೆದ ಎರಡು ವಾರಗಳ ಕಾಲ ಸುರಿದ ನಿರಂತರ ಮಳೆಯಿಂದ ಕಾವೇರಿ ನಾಡು ಕೊಡಗಿನ ಸೌಂದರ್ಯ ಇಮ್ಮಡಿಯಾಗಿದೆ. ಎಲ್ಲೆಲ್ಲೂ ಜಲವೈಭವ ಕಂಡು ಬಂದಿದ್ದು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕೊಡಗು ಈಗ ಪ್ರವಾಸಿಗರನ್ನು ಅತಿ ಹೆಚ್ಚು ಆಕರ್ಷಿಸುತ್ತಿದೆ. ನೋಡಿದಲ್ಲೆಲ್ಲಾ ಹಸಿರು, ಮೈದುಂಬಿ ಹರಿಯುತ್ತಿರುವ ನದಿ, ತೊರೆ, ಝರಿ, ಜಲಪಾತಗಳು ದೇಶ ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಡಿಕೇರಿಯ ಅಬ್ಬಿ ಜಲಪಾತ, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ ಸೇರಿದಂತೆ ಪ್ರಮುಖ ಪ್ರವಾಸಿತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕಂಡು ಬರುತ್ತಿದ್ದಾರೆ. ಅಬ್ಬಿ ದುಮ್ಮಿಕ್ಕಿ ಹರಿಯುತ್ತಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ತುಂಬಿದ ಕೆರೆ :: ನಿರಂತರ ಮಳೆಯಿಂದ ಮಡಿಕೇರಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಕೆರೆ ತುಂಬಿ ಹರಿಯುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.









