
ವಿರಾಜಪೇಟೆ ಮೇ 31 NEWS DESK : ವಿದ್ಯಾರ್ಥಿಗಳು ಕಲಿಕೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಒತ್ತು ನೀಡುವಂತೆ ಸಾಹಿತಿ ಹಾಗೂ ಬರಹಗಾರರಾದ ಅರವಿಂದ ಚೊಕ್ಕಾಡಿ ಸಲಹೆ ನೀಡಿದರು. ವಿರಾಜಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ಕನ್ನಡ ಭಾಷೆಯ ಬಳಕೆ ಮತ್ತು ಅದರ ಸ್ಥಿತಿಗತಿಯನ್ನು ಉಲ್ಲೇಖಿಸಿದರು. ಸಾಮಾಜಿಕ ಮಾಧ್ಯಮಗಳು ಬಳಸುವ ಭಾಷೆಯು ಜನಸಾಮಾನ್ಯರ ಭಾವನೆಗಳ ಮೇಲೆ ಬೀರುವ ಪರಿಣಾಮಗಳು ಹಾಗೂ ಅದರಿಂದ ಸಮಾಜದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತವಾದ ಘಟನೆಗಳ ಬಗ್ಗೆ ವಿವರಿಸಿದರು. ವೃತ್ತಿ ಶಿಕ್ಷಣವನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು. ನಿವೃತ್ತ ಕ್ರೀಡಾ ಅಧಿಕಾರಿ ಸಿ.ಪಿ ಪೂಣಚ್ಚ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲೂ ಆಸಕ್ತಿ ವಹಿಸಿದಾಗ ಮಾತ್ರ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಾವು ಸದೃಢವಾಗಿ ಮತ್ತು ಆರೋಗ್ಯಯುತವಾಗಿರಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಕೆ.ಸಿ ಮಾತನಾಡಿ, ಪ್ರಸಕ್ತ ಸಾಲಿನ ಕಾಲೇಜಿನ ಸಾಧನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅವಕಾಶಗಳನ್ನು ಬಳಸಿಕೊಂಡು ಭವ್ಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿ ಸಂಚಾಲಕರಾದ ಗುರುಪ್ರಸಾದ್.ಎನ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ವೇಣುಗೋಪಾಲ್ ಹೆಚ್.ಎಸ್ ಸ್ವಾ ಗತಿಸಿದರು, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಚರಿತ ಎಂ.ಆರ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಹರೀಶ್ ನಿರೂಪಿಸಿದರು. 2024-25ನೇ ಸಾಲಿನ ‘ಅತ್ಯುತ್ತಮ ವಿದ್ಯಾರ್ಥಿ’ ಪ್ರಶಸ್ತಿಯನ್ನು ತೃತೀಯ ಬಿ.ಕಾಂ ವಿದ್ಯಾರ್ಥಿನಿ ಫಾತಿಮತ್ ರಾಹಿಲ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು ವಿತರಣೆ ಹಾಗೂ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.










