
ಸೋಮವಾರಪೇಟೆ NEWS DESK ಮೇ 31 : ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದ ಕಾಫಿ ಗಿಡಗಳು ನಾಶವಾಗಿವೆ. ಕೂತಿ ಗ್ರಾಮದ ಡಿ.ಕೆ.ಪ್ರಕಾಶ್ ಎಂಬುವವರಿಗೆ ಸೇರಿದ ಅರ್ಧ ಎಕರೆಯಷ್ಟು ಜಾಗ ಶುಕ್ರವಾರ ರಾತ್ರಿ ಸಂಭವಿಸಿದ ಭೂಕುಸಿತದಿಂದ ಕೊಚ್ಚಿಹೋಗಿದೆ. ಕೂತಿ-ಹೊಸೂರು -ಶನಿವಾರಸಂತೆಗೆ ಸಂಪರ್ಕ ಕಲ್ಪಿಸುವ ಬೆಟ್ಟದ ರಸ್ತೆಯಲ್ಲಿ ಭೂ ಕುಸಿತವಾಗಿದೆ. ಮಳೆ ಹೀಗೆ ಮುಂದುವರೆದರೆ ರಸ್ತೆಯು ಕುಸಿಯುವ ಆತಂಕ ಎದುರಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಕರಿಬಸವರಾಜು, ಪ್ರಬಾರ ಸಹಾಯ ತೋಟಗಾರಿಕೆ ಇಲಾಖೆ ಅಧಿಕಾರಿ ಎಸ್.ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2018ರಲ್ಲಿ ಭೂ ಕುಸಿತ ಉಂಟಾದ ಪ್ರದೇಶದ ಸಮೀಪದಲ್ಲೆ ಕುಸಿತ ಕಂಡಿದ್ದು, ಜನರಲ್ಲಿ ಆತಂಕ ಮೂಡಿದೆ.








