
ಮಡಿಕೇರಿ NEWS DESK ಜೂ.1 : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸ್ವತ: ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಹಿನ್ನೆಲೆ ಪೌರ ಸೇವಾ ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ರಾಜ್ಯವ್ಯಾಪಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಭಾಗವಾಗಿ ವಿರಾಜಪೇಟೆಯಲ್ಲೂ ಪೌರಸೇವಾ ನೌಕರರು ಪುರಸಭೆ ಆವರಣದಲ್ಲಿ ಧರಣಿ ನಡೆಸುತ್ತಿದ್ದರು. ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪೊನ್ನಣ್ಣ ಅವರು, ಪುರಸಭೆ ನೌಕರರ ಬೇಡಿಕೆಗಳನ್ನು ಆಲಿಸಿದರು. ಈ ಹಿಂದೆ ತಾವು ಪುರಸಭೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಿರುವುದನ್ನು ನೆನಪಿಸಿದ ಶಾಸಕರು, ಮುಂದೆಯೂ ಸ್ಪಂದಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು. ಮೊದಲು ನೌಕರರ ಸಂಘದ ಪದಾಧಿಕಾರಿಯೊಬ್ಬರು ಇದಕ್ಕೆ ಒಪ್ಪದೇ ಇದ್ದಾಗ ಪಟ್ಟಣದ ನೈರ್ಮಲ್ಯದ ವಿಚಾರದಲ್ಲಿ ಯಾವುದೇ ರಾಜಿಯಾಗಲು ಸಾಧ್ಯವಿಲ್ಲ. ತಾವೇ ಖುದ್ದು ಸ್ವಚ್ಛತಾ ಕಾರ್ಯ ಮಾಡುವುದಾಗಿ ತಿಳಿಸಿದ ಶಾಸಕರು ಸ್ವಚ್ಛತಾ ವಾಹನದ ಚಾಲನೆಗೆ ಮುಂದಾದರು. ಈ ಸಂದರ್ಭ ಪೌರಸೇವಾ ನೌಕರರು ಕರ್ತವ್ಯಕ್ಕೆ ಹಾಜರಾಗುವುದಾಗಿ ಒಪ್ಪಿಕೊಂಡರು.
ನೌಕರರ ಮನವೊಲಿಸುವ ಸಂದರ್ಭ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಹಾಜರಿದ್ದರು.










