
ಮಡಿಕೇರಿ ಜೂ.2 NEWS DESK : ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಳೆ ಹಾನಿ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದರು. ವಿರಾಜಪೇಟೆ ತಾಲ್ಲೂಕಿನ ಬೆಟೋಳಿ ಗ್ರಾಮ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಡೆಗೋಡೆ ಪರಿಶೀಲಿಸಿದರು. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಎತ್ತರದ ತಡೆಗೋಡೆ ಕುಸಿದಿದ್ದು, ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗದವರು ಸರಿಪಡಿಸುವಂತೆ ಶಾಸಕರು ನಿರ್ದೇಶನ ನೀಡಿದರು. ಈಗಾಗಲೇ ನಿರ್ಮಿಸಿರುವ ಸುತ್ತುಗೋಡೆ ಮತ್ತಷ್ಟು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು. ಯಾರಿಗೂ ತೊಂದರೆ ಆಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು. ಬಳಿಕ ಆರ್ಜಿ ಗ್ರಾಮದ ಅನ್ವರುಲ್ ಉಧಾ ಶಾಲೆಯ ಬಳಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಶಾಸಕರು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಕಾಮಗಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಎಂಜಿನಿಯರ್ ಗೆ ಸೂಚಿಸಿದರು. ನಂತರ ವಿರಾಜಪೇಟೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನದ ಹತ್ತಿರದಲ್ಲಿ ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಅಂಬೇಡ್ಕರ್ ಭವನಕ್ಕೆ ತೆರಳುವ ದಾರಿಯಲ್ಲಿಯೇ ಮಣ್ಣು ಬಿದ್ದಿದ್ದು, ಇದನ್ನು ತೆಗೆಯಬೇಕು. ಇಲ್ಲಿನ ಕಾಮಗಾರಿ ನಿರ್ವಹಣೆಗೆ ಈ ಹಿಂದೆ ಏಜೆನ್ಸಿ ಅವರಿಗೆ ನೇರವಾಗಿ 10 ಲಕ್ಷ ರೂ ಅನುದಾನ ಬಿಡುಗಡೆ ಆಗಿದೆ. ಈ ಬಗ್ಗೆ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಎಂಜಿನಿಯರ್ ಗೆ ಸೂಚಿಸಿದರು. ಶಾಸಕರ ಅನುದಾನದಡಿ ಅಂಬೇಡ್ಕರ್ ಭವನ ನಿರ್ಮಾಣದ ಇಂಟರ್ ಲಾಕ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ ಬಿಡುಗಡೆಯಾಗಿದೆ ಎಂದು ಶಾಸಕರಾದ ಎ.ಎಸ್.ಪೆÇನ್ನಣ್ಣ ಅವರು ವಿವರಿಸಿದರು. ಅಂಬೇಡ್ಕರ್ ಭವನ ನಿರ್ವಹಣೆ ಸಂಬಂದ ಅಗತ್ಯ ಕ್ರಮ ವಹಿಸುವಂತೆ ತಹಶಿಲ್ದಾರರು ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು. ಬಳಿಕ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ಗೌರಮ್ಮ ಅವರ ಮನೆ ಪರಿಶೀಲಿಸಿದರು. ಮನೆ ಸಂಪೂರ್ಣ ಹಾನಿಯಾಗಿರುವುದರಿಂದ ಸರ್ಕಾರದ ನಿರ್ದೇಶನದಂತೆ 1.20 ಲಕ್ಷ ರೂ ಪರಿಹಾರದ ಹಣ ಕೂಡಲೇ ನೀಡುವಂತೆ ತಹಶಿಲ್ದಾರರಿಗೆ ಶಾಸಕರು ಸೂಚಿಸಿದರು. ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಧೈರ್ಯ ತುಂಬಿದ ಶಾಸಕರು, ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡಿದರು. ಬಳಿಕ ಮೈತಾಡಿಯಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿದರು. ನಂತರ ಸಿದ್ದಾಪುರಕ್ಕೆ ತೆರಳಿದ ಶಾಸಕರು, ಅಲ್ಲಿನ ರಸ್ತೆ ಕಾಮಗಾರಿ ಪರಿಶೀಲಿಸಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಡಿಸೆಂಬರ್ ತಿಂಗಳಲ್ಲಿಯೇ ಕಾಮಗಾರಿ ಆರಂಭವಾದರೂ ಸಹ ಇಂದಿಗೂ ಪೂರ್ಣಗೊಳ್ಳದಿರುವುದಕ್ಕೆ ಸ್ಥಳದಲ್ಲಿಯೇ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚರಂಡಿ ನಿರ್ಮಾಣಕ್ಕೆ ಗುಂಡಿ ತೆಗೆಯಲಾಗಿದೆ. ಆದರೆ ಕಾಮಗಾರಿ ಕೈಗೊಂಡಿಲ್ಲ, ನಾಗರಿಕರು ಓಡಾಡುವುದು ಹೇಗೆ ಎಂದು ಸಿಟ್ಟಾದ ಶಾಸಕರು, ಎರಡು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಕಾಮಗಾರಿ ಪಡೆದು, 5 ತಿಂಗಳಾದರೂ ಕೆಲಸ ಪೂರ್ಣ ಗೊಳಿಸದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.










