
ಮಡಿಕೇರಿ ಜೂ.2 NEWS DESK : ಸಮಾಜದಲ್ಲಿನ ಜಾತಿ ವ್ಯವಸ್ಥೆ ದೂರ ಆಗಬೇಕಾಗಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ ಪದ್ಧತಿ ಇಲ್ಲದೆ ಇರುವುದು ತೃಪ್ತಿ ತಂದಿದೆ ಎಂದು ಸ್ವತ: ವೈದ್ಯರೂ ಆಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ. ಮಾನವ ಬಂಧುತ್ವ ವೇದಿಕೆ, ಮಹಿಳಾ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಗರದ ಬಾಲಭವನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ `ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಆಸ್ಪತ್ರೆಗಳಲ್ಲಿ ವೈದ್ಯರುಗಳು ರೋಗಿಗಳ ಬಳಿ ಯಾವ ಕಾಯಿಲೆ ಇದೆ ಎಂದು ಕೇಳುತ್ತಾರೆಯೇ ಹೊರತು ನೀನು ಯಾವ ಜಾತಿಯವನು ಎಂದು ಕೇಳುವುದಿಲ್ಲ. ರೋಗಿ ಯಾವುದೇ ಜಾತಿಯವನಾಗಿರಲಿ ರೋಗದ ಬಗ್ಗೆ ಮಾತ್ರ ತಿಳಿದುಕೊಂಡು ಆತನಿಗೆ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಜಾತಿ ಕೇಳದೆ ರೋಗಿಯ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ ಪದ್ಧತಿ ಇಲ್ಲ, ಇದೇ ಮಾದರಿಯಲ್ಲಿ ಸಮಾಜದಲ್ಲೂ ಜಾತಿ ವ್ಯವಸ್ಥೆ ದೂರ ಆಗಬೇಕಾಗಿದೆ. ಒಗ್ಗಟ್ಟನ್ನು ಕಾಯ್ದುಕೊಂಡು ಪ್ರಗತಿ ಸಾಧಿಸಬೇಕಾಗಿದೆ ಎಂದು ಡಾ.ಮಂತರ್ ಗೌಡ ತಿಳಿಸಿದರು. ಪ್ರಗತಿಪರ ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ಪ್ರಗತಿಪರ ಚಿಂತಕರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕಾಳೇಗೌಡ ನಾಗವಾರ, ಲೇಖಕರು ಹಾಗೂ ಪ್ರಾಧ್ಯಾಪಕರಾದ ಡಾ.ರಾಜಪ್ಪ ದಳವಾಯಿ, ಮಾನವೀಯ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್, ಮಹಿಳಾ ಘಟಕದ ಸಂಚಾಲಕಿ ಡಾ.ಲೀಲಾ ಸಂಪಿಗೆ, ಸಂಘಟನೆಯ ಕೊಡಗು ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಕಾವೇರಿ, ವಿಚಾರ ಸಂಕಿರಣದ ಸ್ವಾಗತ ಸಮಿತಿ ಸಂಚಾಲಕ ನೆರವಂಡ ಉಮೇಶ್, ಗೌರವ ಸಂಚಾಲಕ ರಮಾನಾಥ ಬೇಕಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.









