
ಮಡಿಕೇರಿ ಜೂ.6 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜೂ.21 ರಂದು ‘ಒಂದು ಭೂಮಿ ಒಂದು ಆರೋಗ್ಯಕ್ಕೆ ಯೋಗ’ ಎನ್ನುವ ಘೋಷ ವಾಕ್ಯದೊಂದಿಗೆ ನಗರದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆಯೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಜಿ. ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೂಚಿತ ದಿನದಂದು ನಗರದ ಕೆಳಗಿನ ಗೌಡ ಸಮಾಜದಲ್ಲಿ ಬೆಳಗ್ಗೆ 6.45 ಗಂಟೆಗೆ ಯೋಗ ದಿನಾಚರಣೆಯ ಉದ್ಘಾಟನೆ. ಬೆಳಗ್ಗೆ 7 ರಿಂದ 8 ರವರೆಗೆ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆಯೆಂದು ತಿಳಿಸಿದರು. ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂ.20 ರಂದು ಸಂಜೆ 5 ಗಂಟೆಗೆ ನಗರದ ಸರ್ಕಾರಿ ಬಸ್ ಡಿಪೋ ಬಳಿಯಲ್ಲಿರುವ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗಾಸನಗಳ ಪೂರ್ವಾಭ್ಯಾಸವನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು. ಯೋಗಾಭ್ಯಾಸದೊಂದಿಗೆ ಸ್ವಚ್ಛತೆ :: ಇದೇ ಜೂ.10 ರಂದು ಯೋಗ ದಿನಾಚರಣೆಯ ಭಾಗವಾಗಿ ಬೆಳಗ್ಗೆ 8.30 ರಿಂದ ನಗರದ ಗಾಂಧಿ ಮೈದಾನದಿಂದ, ಸುದರ್ಶನ ವೃತ್ತದ ಸಮೀಪದ ಗಾಂಧಿ ಭವನದವರೆಗೆ ಯೋಗಾಭ್ಯಾಸದ ಬಳಿಕ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ಹಾಗೂ ಗಾಂಧಿ ಭವನದ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ವಿವರಿಸಿದರು. ಬಲ್ಲಮಾವಟಿಯ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಕೆ.ಜಿ.ಶುಭಾ ಮಾತನಾಡಿ, ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಆಯುಷ್ ಇಲಾಖೆಯ ವತಿಯಿಂದ ‘ಯೋಗ ಧನುಷ್’ ಕಾರ್ಯಕ್ರಮದಡಿ, ಜನ ಸಾಮಾನ್ಯರಿಗೂ ಯೋಗವನ್ನು ತಲುಪಿಸುವ ಪ್ರಯತ್ನವಾಗಿ ಕೆಎಸ್‍ಆರ್‍ಟಿಸಿ ನೌಕರರರಿಗೆ, ಖೈದಿಗಳಿಗೆ, ದಿವ್ಯಾಂಗರಿಗೆ, ವಾಣಿಜ್ಯ ಮಳಿಗೆ, ವಸತಿ ಸಮುಚ್ಛಯಗಳು, ನ್ಯಾಯಾಲಯಗಳು, ಸರ್ಕಾರಿ ಕಛೇರಿಗಳಲ್ಲಿ, ಸರ್ಕಾರೇತರ ಸಂಸ್ಥೆಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಹತ್ತರಿಂದ ಹದಿನೈದು ನಿಮಿಷದ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತ್ತದೆ ಎಂದರು. ‘ಹಸಿರು ಯೋಗ ಹರಿತ್ ಯೋಗ’ಕಾರ್ಯಕ್ರಮದಡಿ ಎನ್‍ಎಸ್‍ಎಸ್, ಸ್ಕೌಟ್ ಮತ್ತು ಗೈಡ್ಸ್, ಎನ್‍ಸಿಸಿ, ಅರಣ್ಯ ಇಲಾಖೆ, ಇತರ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಘÀ ಸಂಸ್ಥೆಗಳು, ಮಡಿಕೇರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ನಿರ್ದಿಷ್ಟ ಸ್ಥಳಗಳಲ್ಲಿ ಯೋಗಾಭ್ಯಾಸ ನಡೆಸಿ, ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಮತ್ತು ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ಯೋಗ ರೀಲ್ಸ್ ಸ್ಪರ್ಧೆ :: ಯುವ ಪೀಳಿಗೆಯಲ್ಲಿ ಯೋಗದ ಕುರಿತು ಆಸಕ್ತಿ ಮತ್ತು ಉತ್ಸಾಹವನ್ನು ಮೂಡಿಸುವ ಸಲುವಾಗಿ ಯೋಗ ರೀಲ್ಸ್ ಸ್ಪರ್ಧೆ, ಯೋಗ ಜಿಂಗಲ್ಸ್ ರಚನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯೋಗ ಪಟುಗಳು ಹಾಗೂ ಯೋಗಾಸಕ್ತರು https://yoga.ayush.gov.in/yoga-sangam ಲಿಂಕ್ ಬಳಸಿ ಯೋಗಕ್ಕೆ ಸಂಬಂಧಿಸಿದ ರೀಲ್ಸ್, ಜಿಂಗಲ್ಸ್‍ಗಳನ್ನು ಹಾಕಬಹುದೆಂದು ತಿಳಿಸಿದರು. ಯೋಗ ಪಾರ್ಕ್ :: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‍ನ (ನೀಮಾ) ಕೊಡಗು ಘಟಕದ ಅಧ್ಯಕ್ಷರಾದ ಡಾ. ರಾಜಾರಾಂ ಮಾತನಾಡಿ, ಯೋಗಾಭ್ಯಾಸಕ್ಕೆ ಪೂರಕವಾದ ಪರಿಸರದ ನಡುವಿನ 10 ಏಕರೆ ಜಾಗವನ್ನು ಒದಗಿಸುವಂತೆ ಆಯುಷ್ ಇಲಾಖೆಯೊಂದಿಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಪೂರಕ ಸ್ಪಂದನವನ್ನು ಜಿಲ್ಲಾಡಳಿತ ನೀಡಿದ್ದು, ಲಭ್ಯ ಜಾಗದಲ್ಲಿ ಜೌಷಧೀಯ ಸಸ್ಯಗಳ ಉದ್ಯಾನವನದೊಂದಿಗೆ ಯೋಗ ಪಾರ್ಕ್ ಸಜ್ಜುಗೊಳ್ಳಲಿದೆ. ಮುಂದಿನ 2026ರ ಒಳಗಾಗಿ ಯೋಗ ಪಾರ್ಕ್ ಲಭ್ಯವಾಗುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಯೋಗ ಗುರು ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಯೋಗಾಭ್ಯಾಸದೊಂದಿಗೆ ಹಸಿರ ಪರಿಸರ ಸಂರಕ್ಷಣೆಯ ಚಿಂತನೆಯಡಿ ಈ ಬಾರಿ ಯೋಗ ದಿನಾಚರಣೆಯೊಂದಿಗೆ ‘ಹಸಿರು ಯೋಗ ಹರಿತ್ ಯೋಗ’ ಪರಿಕಲ್ಪನೆಯನ್ನು ಜೋಡಿಸಲಾಗಿದೆ. ಶುದ್ಧ ಪರಿಸರ ಮತ್ತು ಯೋಗದಿಂದ ಉತ್ತಮ ಆರೋಗ್ಯವನ್ನು ಕಂಡು ಕೊಳ್ಳಲು ಸಾಧ್ಯವೆಂದು ಅಭಿಪ್ರಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಆಯುಷ್ ಇಲಾಖೆಯ ಸಿ.ಕರುಣಾಕರ್ ಉಪಸ್ಥಿತರಿದ್ದರು.









