
ಮಡಿಕೇರಿ ಜೂ.9 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗೋಣಿಕೊಪ್ಪಲು ಪಂಚಾಯಿತಿ ಹಳೆ ಕಟ್ಟಡದ ಸಭಾಂಗಣದಲ್ಲಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಇಂದಿನ ಕಾಲಘಟ್ಟದಲ್ಲಿ ಹಿರಿಯರನ್ನು ಗೌರವಿಸುವುದು ಮತ್ತು ಹಿರಿಯರಿಗೆ ಬೇಕಾದ ಎಲ್ಲಾ ಸೌಕರ್ಯ-ಸೌಲತ್ತುಗಳನ್ನು ಕಲ್ಪಿಸುವುದು ನಮ್ಮೆಲ್ಲರ ಪ್ರಮುಖ ಆದ್ಯತೆ ಆಗಿರಬೇಕು. ನಮ್ಮ ಹಿರಿಯರು ಕಟ್ಟಿದ ನಾಡಿನಲ್ಲಿ ನಾವೆಲ್ಲ ಇಂದು ಜೀವಿಸುತ್ತಿದ್ದು, ಅದನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಂಡಲ್ಲಿ ನಾಡಿನ ಎಲ್ಲಾ ಹಿರಿಯ ಜೀವಿಗಳಿಗೆ ನಾವು ನ್ಯಾಯ ಒದಗಿಸಿದಂತೆ ಆಗುತ್ತದೆ ಎಂದು ಹೇಳಿದರು. ಸರ್ಕಾರ ಹಿರಿಯ ನಾಗರಿಕರ ಅನುಕೂಲಕೆಂದು ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಎಲ್ಲಾ ಹಿರಿಯರಿಗೆ ತಲುಪುವಂತೆ ಆಗಲು ನಾವೆಲ್ಲರೂ ಶ್ರಮ ವಹಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.










