
ಮಡಿಕೇರಿ ಜೂ.9 NEWS DESK : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಕೆಂದು ಒತ್ತಾಯಿಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾರ್ವರ್ಡ್ ವಿದ್ವಾಂಸ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆಯ ಮುಂದಿನ ದಿನಾಂಕವನ್ನು 2025 ಜು.23 ಕ್ಕೆ ನ್ಯಾಯಾಧೀಶರು ಮುಂದೂಡಿದರು. ಸಿಎಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಅರ್ಜಿದಾರ ಸಂಖ್ಯೆ-2 ಆಗಿದ್ದಾರೆ. ಕೇಂದ್ರ ಕಾನೂನು ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿವಾದಿ ಸಂಖ್ಯೆ ಕ್ರಮವಾಗಿ 1, 2 ಮತ್ತು 3 ಎಂದು ಉಲ್ಲೇಖಿಸಲಾಗಿದೆ. ಹೈ ಕೋರ್ಟ್ ವಕೀಲರಾದ ಕೀರನ್ ನಾರಾಯಣ್ ಅವರು ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಎನ್.ಯು.ನಾಚಪ್ಪ ಅವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಯು.ನಾಚಪ್ಪ ಅವರು, ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾನೂನು ಹೋರಾಟದಿಂದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ನ್ಯಾಯ ಸಿಗಲಿದೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‍ಟಿ ಟ್ಯಾಗ್ ಪಡೆಯುವ ವಿಶ್ವಾಸವಿದೆ ಎಂದರು. ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಆದಿಮ ಸಂಜಾತ ಏಕ ಜನಾಂಗೀಯ ಕೊಡವರ ಸಂವಿಧಾನಿಕ ಹಕ್ಕು, ಸ್ವಯಂ ನಿರ್ಣಯದ ಹಕ್ಕು, ಸ್ವಯಂ ಆಡಳಿತದ ಹಕ್ಕಿನ ವಿಚಾರವಾಗಿ ಕಳೆದ 35 ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಶಾಂತಿಯುತವಾಗಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದು, ನ್ಯಾಯಾಲಯದ ಮೂಲಕ ಜಯ ಸಿಗಲಿದೆ ಎಂದು ತಿಳಿಸಿದರು.










