
ಮಡಿಕೇರಿ ಜೂ.10 NEWS DESK : ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ದಿನದಂದೇ ಧಾರುಣಾವಾಗಿ ಅಂತ್ಯಕಂಡ ಮೀನಾಳ ಕುಟುಂಬಕ್ಕೆ ಅಂದು ನೀಡಿದ್ದ ಭರವಸೆಯಂತೆ ಶಾಸಕ ಡಾ.ಮಂತರ್ ಗೌಡ ನೂತನ ಮನೆ ನಿರ್ಮಿಸಿ ಕೊಟ್ಟಿದ್ದು, ಪೋಷಕರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಡಿಕೇರಿ ತಾಲ್ಲೂಕು, ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಮುಟ್ಲು ಗ್ರಾಮದ ಉದಿಯಂಡ ಸುಬ್ರಮಣಿ ಹಾಗೂ ಜಾನಕಿ ದಂಪತಿಯ ಪುತ್ರಿ ಮೀನಾ (16) ಹತ್ಯೆ ನಂತರ ಕುಟುಂಬದ ಕಷ್ಟವನ್ನು ಅರಿತ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹಾಗೂ ಸ್ನೇಹಿತರ ಬಳಗ ಸೇರಿ ಕೊಂಡು ಸುಮಾರು 7 ಲಕ್ಷ ರೂ. ಮನೆ ನೀಡುವ ನುಡಿಯಂತೆ ಮನೆ ಹಸ್ತಾಂತರದೊಂದಿಗೆ ಬಾವುಕ ಕ್ಷಣಕ್ಕೆ ಸಾಕ್ಷಿಯಾದರು. ಮೀನಾ ಕುಟುಂಬ ಕೀ ಸ್ವೀಕರಿಸಿ ಭರವಸೆ ಈಡೇರಿಸಿಕೊಂಡ ಕ್ಷಣಕ್ಕೆ ಸಾಕ್ಷಿಯಾದರು. ಮನೆಯ ಗೋಡೆಯಲ್ಲಿ ಮೀನಾ ಭಾವಚಿತ್ರ ಎಲ್ಲರ ಕಣ್ಣಲ್ಲಿ ನೀರು ಜಾರುವಂತೆ ಮಾಡಿತು. ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ತೆರಳಿದ್ದ ಸಂದರ್ಭ ಮನೆ ನಿರ್ಮಿಸುವ ಚಿಂತನೆ ಬಂತು. ಇದರಂತೆ ಮನೆ ನಿರ್ಮಿಸಲಾಗಿದೆ. ಸ್ಥಳೀಯರು ಕೂಡ ಈ ಬಗ್ಗೆ ಗಮನ ಸೆಳೆದಿದ್ದರು. ಸ್ನೇಹಿತರು ಕೂಡ ಸ್ಪಂಧಿಸಿದ್ದಾರೆ ಎಂದು ಶಾಸಕ ಡಾ. ಮಂಥರ್ ಗೌಡ ಈ ಸಂದರ್ಭ ಮನದಾಳ ಹಂಚಿಕೊಂಡರು. ಮನೆ ನಿರ್ಮಾಣ ಕಾರ್ಯ ದುಃಖಿತ ಪೋಷಕರಿಗೆ ನೆಲೆ, ನಂಬಿಕೆ ಹಾಗೂ ಸಮಾಜದ ಸೌಹಾರ್ದತೆಯ ಸಂಕೇತವಾಗಿ ನಿಂತಿದೆ. ಸಮಾಜದಲ್ಲಿ ಮಾನವೀಯತೆ ಮತ್ತು ಜನಪರ ರಾಜಕಾರಣದ ಉದಾಹರಣೆಯಾಗಿ ದಾಖಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಸಂದರ್ಭ ಮಾಜಿ ಎಂಎಲ್‍ಸಿ ಶಾಂತೇಯಂಡ ವೀಣಾ ಅಚ್ಚಯ್ಯ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಮಡಿಕೇರಿ ಬ್ಲಾಕ್ ಅಧ್ಯಕ್ಷೆ ಮಮತಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಎಳ್‍ನಾಡ್ ಸಂಘದ ಸದಸ್ಯ ದೇವಯ್ಯ, ಗ್ರಾಮಸ್ಥರಾದ ಸೋಮಯ್ಯ ಶಿರಂಗಳ್ಳಿ, ಪ್ರಮುಖರಾದ ತೆನ್ನಿರಮೈನಾ, ಸುರೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.









