
ಕುಶಾಲನಗರ NEWS DESK ಜೂ.14 : ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಘಟಕ ಪ್ರತಿನಿಧಿಗಳ ಮತ್ತು ಸಂಯೋಜಕರ ಸಭೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(NDRF) ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆಸಲಾಯಿತು. ಈ ಸಂದರ್ಭ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಶೌರ್ಯ ಕಾರ್ಯಕ್ರಮದ ಹಿನ್ನೆಲೆ ಹಾಗೂ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸಿದರು. ಜೊತೆಗೆ ಪ್ರಕೃತಿ ವಿಕೋಪ ಸಂದರ್ಭ ಶೌರ್ಯ ಸ್ವಯಂ ಸೇವಕರ ಸಹಕಾರದ ಬಗ್ಗೆ ಪತ್ರವನ್ನು NDRF ಅಧಿಕಾರಿಗಳಿಗೆ ನೀಡಿದರು. ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿಗಳಾದ ಅನನ್ಯ ವಾಸುದೇವನ್ ಈ ಸಂದರ್ಭ ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಸ್ಥಳೀಯ ಸ್ವಯಂ ಸೇವಕರ ಸೇವೆ ಬಹಳ ಮುಖ್ಯವಾಗಿರುತ್ತದೆ ಎಂದರಲ್ಲದೆ ವಿಪತ್ತು ನಿರ್ವಹಣೆ ಕೇವಲ ಸರ್ಕಾರದ ಕೆಲಸವಲ್ಲ, ಸರ್ಕಾರದ ಜತೆ ಸಾರ್ವಜನಿಕರ ಜವಾಬ್ದಾರಿ ಕೂಡ ಮುಖ್ಯವಾಗಿದೆ, ರಾಜ್ಯದಲ್ಲಿ ಸರ್ಕಾರೇತರ ಸಂಸ್ಥೆಯಾಗಿ ಸಮರ್ಪಕವಾದ ಆಡಳಿತ ವ್ಯವಸ್ಥೆ ಮತ್ತು ಉತ್ತಮ ಸಂಘಟನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಬಗ್ಗೆ ಶ್ಲಾಘಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿ ಅಜಯ್ ಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ಇರುವ ಬಗ್ಗೆ ಶ್ಲಾಘಿಸಿದರು. NDRF ಪಡೆಯ ವಿಪತ್ತು ಕಾರ್ಯಾಚರಣೆಯಲ್ಲಿ ಶೌರ್ಯ ಸ್ವಯಂ ಸೇವಕರ ಸಹಾಯ ಬಹಳ ಮುಖ್ಯ ಎಂದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಚಿಂತನೆಯ ಬಗ್ಗೆ ಅಭಿನಂದನೆ ಸಲ್ಲಿಸಿದರು. ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಟಿ ರಂಗಸ್ವಾಮಿ, ಜಿಲ್ಲಾ ನಿರ್ದೇಶಕರಾದ ಲೀಲಾವತಿ. ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ, ಕಿಶೋರ್ ಕುಮಾರ್, ಗಣೇಶ್ ಆಚಾರ್ಯ, ಹನುಮಂತ ಅಂಗಡಿ, ಮೇಲ್ವಿಚಾರಕ ನಿತೇಶ್ ಕೆ ಮತ್ತು ಜಿಲ್ಲೆಯ ಮೂರು ತಾಲೂಕುಗಳ ಘಟಕ ಪ್ರತಿನಿಧಿಗಳು ಮತ್ತು ಸಂಯೋಜಕರು ಇದ್ದರು.








