
ಕುಶಾಲನಗರ NEWS DESK ಜೂ.14 : ಮನುಷ್ಯನ ಜೀವನದಲ್ಲಿ ನೀರಿನ ಪಾತ್ರ ಅತೀ ಮುಖ್ಯವಾಗಿದ್ದು, ಜಲ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ಭೂಮಿಕ ಮಹಿಳಾ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜೆ ಫಿಲೋಮಿನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಕಾವೇರಿ ಮಹಾ ಆರತಿ ಕ್ಷೇತ್ರದಲ್ಲಿ ನಡೆದ 173 ನೆಯ ಹುಣ್ಣಿಮೆ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ವಚ್ಛವಾಗಿ ಹರಿಯುವ ನದಿಯ ನೀರನ್ನು ಕಲುಷಿತಗೊಳಿಸದಂತೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು, ಪ್ರಕೃತಿ ಪರಿಸರವನ್ನು ಆರಾಧಿಸುವ ಮೂಲಕ ಸಂರಕ್ಷಣೆ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಆರತಿ ಪೂಜೆ ಕಾರ್ಯಕ್ರಮದ ಅಂಗವಾಗಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅರ್ಚನೆ ಅಷ್ಟೋತ್ತರ ಮೂಲಕ ನದಿಗೆ ಆರತಿ ಬೆಳಗಿದರು. ಇದೇ ಸಂದರ್ಭ ಕುಶಾಲನಗರ ಪುರಸಭೆಯಲ್ಲಿ 35 ವರ್ಷಗಳ ಕಾಲ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕುಪ್ಪು ಸ್ವಾಮಿ ಅವರನ್ನು ಆರತಿ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರು ಹಾಗೂ ನಮಾಮಿ ಕಾವೇರಿ ಬಳಗದ ಸಂಚಾಲಕರಾದ ಲೀಲಾವತಿ, ಯೋಜನೆಯ ತಾಲೂಕು ಅಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕ ನಾಗರಾಜ್, ಕೊಡಗು ಜಿಲ್ಲಾ ಬ್ಯುಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ರತ್ನ ಯತೀಶ್, ಪೂಜಾ ಸೇವಾರ್ಥದಾರರಾದ ಪದ್ಮ ಪುರುಷೋತ್ತಮ್, ಆರತಿ ಬಳಗದ ಸಂಚಾಲಕರಾದ ವನಿತಾ ಚಂದ್ರಮೋಹನ್, ಧರಣಿ, ಜಯಲಕ್ಷ್ಮಿ ಮತ್ತು ನಮಾಮಿ ಕಾವೇರಿ ಬಳಗದ ಸದಸ್ಯರು ಇದ್ದರು.










