
ಮಡಿಕೇರಿ ಜೂ.14 NEWS DESK : ಕೊಡಗು ಜಿಲ್ಲೆಯಲ್ಲಿ 2024-25ನೇ ಸಾಲಿನ ಕಾರ್ಯಾದೇಶದಂತೆ ಮಳೆಹಾನಿ ಕಾಮಗಾರಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‍ಡಿಆರ್‍ಎಫ್- ಕೇಂದ್ರ ಸರ್ಕಾರದ ಅನುದಾನ) ಅನುದಾನದಿಂದ ನಡೆಯುತ್ತಿದೆ. ಆದರೆ ಜಿಲ್ಲೆಯ ಕಾಂಗ್ರೆಸಿಗರು ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರದ ಅನುದಾನದಿಂದ ಕೈಗೆತ್ತಿಕೊಳ್ಳಲಾಗಿದೆ ಎಂದು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರರು ಹಾಗೂ ಕೊಡಗು ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋಟ್ಯಾಂತರ ರೂ. ಎನ್‍ಡಿಆರ್‍ಎಫ್ ಅನುದಾನದಿಂದ ಜಿಲ್ಲಾ ವ್ಯಾಪಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿ ರಾಜ್ಯ ಸರ್ಕಾರದ ಅನುದಾನದಿಂದ ಕಾರ್ಯಗತಗೊಳ್ಳುತ್ತಿದೆ ಎಂದು ಕಾಂಗ್ರೆಸಿಗರು ಪ್ರತಿಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್‍ಡಿಆರ್‍ಎಫ್ ಶೇ.75ರಷ್ಟು ಅನುದಾನ ನೀಡಿದರೆ ಉಳಿದ ಶೇ.25ನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. 2024-25ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ರಸ್ತೆ ದುರಸ್ತಿಯ 495 ಕಾಮಗಾರಿಗಳಿಗೆ ಎನ್‍ಡಿಆರ್‍ಎಫ್ ಮೂಲಕ 1,483.69 ಲಕ್ಷ ರೂ. ಮೀಸಲಿಟ್ಟಿದ್ದು, ಶೇ.75ರ ಅನುಪಾತದಲ್ಲಿ 1,112.77 ಲಕ್ಷ ಹಣ ಬಿಡುಗಡೆಯಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಯ 14 ಕಾಮಗಾರಿಗಳಿಗೆ 30 ಲಕ್ಷ ರೂ. ನಿಗಧಿಯಾಗಿದ್ದು, 22.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯ 18 ರಸ್ತೆ ದುರಸ್ತಿ ಕಾಮಗಾರಿಗೆ 10.20 ಲಕ್ಷ ರೂ. ಮೀಸಲಿಟ್ಟಿದ್ದು, 7.65 ಲಕ್ಷ ಬಿಡುಗಡೆಯಾಗಿದೆ. ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಯ 13 ಕಾಮಗಾರಿಗಳಿಗೆ 12.90 ಲಕ್ಷ ನಿಗಧಿಯಾಗಿದ್ದು, 9.68 ಲಕ್ಷ ಬಿಡುಗಡೆಯಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 6 ರಸ್ತೆ ದುರಸ್ತಿ ಕಾಮಗಾರಿಗೆ 5.70 ಲಕ್ಷ ರೂ. ನಿಗಧಿಯಾಗಿದ್ದು, 4.28 ಲಕ್ಷ ರೂ. ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಸ್ತೆ ದುರಸ್ತಿಯ 74 ಕಾಮಗಾರಿಗಳಿಗೆ 211.54 ಲಕ್ಷ ರೂ. ಮೀಸಲಿಟ್ಟಿದ್ದು, 158.66 ಲಕ್ಷ ರೂ. ಬಿಡುಗಡೆಯಾಗಿದೆ. ಚೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ 3,137 ವಿದ್ಯುತ್ ಕಂಬಗಳ ಬದಲಾವಣೆ ಮತ್ತು 2.20 ಕಿ.ಮೀ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯಕ್ಕಾಗಿ 157.86 ಲಕ್ಷ ರೂ. ಮಂಜೂರಾಗಿದ್ದು, ಸಂಪೂರ್ಣ ಹಣ ಬಿಡುಗಡೆಯಾಗಿದೆ. ಹೀಗೆ ಒಟ್ಟು 620 ಕಾಮಗಾರಿಗಳಿಗೆ 1911.89 ಲಕ್ಷ ರೂ. ಮಂಜೂರಾಗಿದ್ದು, 1473.38 ಲಕ್ಷ ರೂ. ಬಿಡುಗಡೆಯಾಗಿದೆ. ಅಲ್ಲದೆ ಅತಿ ಮಳೆಯಿಂದ ಅಕಾಲಿಕವಾಗಿ ಮೃತಪಟ್ಟ ವಿರಾಜಪೇಟೆಯ ವಿಷ್ಣು ಬೆಳ್ಯಪ್ಪ ಹಾಗೂ ಗೌರಿ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ಎನ್‍ಡಿಆರ್‍ಎಫ್ ಅನುದಾನದಿಂದ ನೀಡಲಾಗಿದೆ. ಬಹುತೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಪರಿಹಾರಕ್ಕೆ ಎನ್‍ಡಿಆರ್‍ಎಫ್ ಅನುದಾನದ ಮೂಲಕವೇ ಹಣ ಹಂಚಿಕೆಯಾಗುತ್ತಿದೆ. ಆದರೆ ಇದನ್ನು ಬಹಿರಂಗಪಡಿಸದ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಅನುದಾನವೆಂದು ಪ್ರತಿಬಿಂಬಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ವಿವಿಧ ಭಾಗ್ಯಗಳ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಬಹುತೇಕ ಹಣವನ್ನು ಖರ್ಚುಮಾಡುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ಸಮರ್ಪಕವಾಗಿ ಅನುದಾನವನ್ನು ಬಿಡುಗಡೆ ಮಾಡದೆ ಇರುವುದರಿಂದ ಕೊಡಗಿನ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಎನ್‍ಡಿಆರ್‍ಎಫ್ ಅನುದಾನ ಸೇರಿದಂತೆ ಕೇಂದ್ರದ ಅನುದಾನದ ಮೂಲಕವೇ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ಕಾಂಗೆಸ್ ಕಾರ್ಯಕರ್ತರು ತೊಡಗಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಜನಪ್ರತಿನಿಧಿಗಳು ಎನ್‍ಡಿಆರ್‍ಎಫ್ ಅನುದಾನವನ್ನು ತಮ್ಮ ಪಕ್ಷದ ಕಾರ್ಯಕರ್ತರುಗಳ ಮನೆಗಳಿಗೆ ತೆರಳುವ ರಸ್ತೆಗಳ ದುರಸ್ತಿಗೆ ಮಾತ್ರ ಬಳಕೆಯಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ರಾಕೇಶ್ ದೇವಯ್ಯ, ಇತರ ರಸ್ತೆಗಳ ನಿರ್ಲಕ್ಷ್ಯವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಎನ್‍ಡಿಆರ್‍ಎಫ್ ಅನುದಾನ ಅಗತ್ಯ ಕಾಮಗಾರಿಗಳಿಗೆ ನ್ಯಾಯಯುತವಾಗಿ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.









