
ಮಡಿಕೇರಿ ಜೂ.17 NEWS DESK : ಹಿಂದೂ ರುದ್ರಭೂಮಿಗಾಗಿ ಒತ್ತಾಯಿಸಿ ಸ್ಮಶಾನ ಹೋರಾಟ ಸಮಿತಿ ನೆಲ್ಲಿಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನೆಲ್ಲಿಹುದಿಕೇರಿ ಗ್ರಾಮದ ಅಂಚೆ ಕಚೇರಿ ಬಳಿಯಿಂದ ಗ್ರಾಮ ಪಂಚಾಯಿತಿ ವರೆಗೆ ಅಣುಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು ಪಂಚಾಯಿತಿ ಕಚೇರಿಯ ಎದುರು ಅಣುಕು ಶವವನ್ನಿಟ್ಟು, ಪಂಚಾಯಿತಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸ್ಮಶಾನ ಹೋರಾಟ ಸಮಿತಿಯ ಪ್ರಮುಖ ಪಿ.ಆರ್.ಭರತ್, ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಿಂದೂಗಳ ಸಂಖ್ಯೆ 6,000ಕ್ಕೂ ಅಧಿಕ ಇದ್ದು, ಸ್ಮಶಾನ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಇರುವ ಸ್ಮಶಾನವು ಕಾವೇರಿ ನದಿ ದಡದಲ್ಲಿದ್ದು, ಮಳೆಗಾಲದಲ್ಲಿ ನದಿ ದಡ ಕುಸಿಯುತ್ತದೆ. ಇದರಿಂದ ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎಂದರು. ಶಾಶ್ವತ ಸ್ಮಶಾನದ ಜಾಗಕ್ಕಾಗಿ ಒತ್ತಾಯಿಸಿ ಕಳೆದ ಹಲವು ತಿಂಗಳಿನಿಂದ ಹೋರಾಟ ನಡೆಸಲಾಗುತ್ತಿದೆ. ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆಯೇ ಹೊರತು ಸ್ಮಶಾನಕ್ಕಾಗಿ ಜಾಗ ಗುರುತಿಸಿಲ್ಲ. ಅಲ್ಲದೆ ಸ್ಮಶಾನಕ್ಕಾಗಿ ಮೀಸಲಾಗಿರುವ ಜಾಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿಕೊಡುವಂತೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳದೆ ಗ್ರಾ.ಪಂ ನಿರ್ಲಕ್ಷ ವಹಿಸಿದೆ ಎಂದು ದೂರಿದರು. ಸ್ಮಶಾನಕ್ಕೆ ಗುರುತಿಸಿರುವ ದಾಖಲೆ ಇರುವ ಜಾಗದ ಬಗ್ಗೆ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಆದರೆ ಗ್ರಾ.ಪಂ ಆಡಳಿತ ಮಂಡಳಿ ಮಾತ್ರ ಮೌನಕ್ಕೆ ಶರಣಾಗಿದ್ದು, ಈ ಬೆಳವಣಿಗೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಮಶಾನ ಜಾಗದ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಶವಗಳನ್ನು ಗ್ರಾ.ಪಂ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಪಿ.ಆರ್.ಭರತ್ ಎಚ್ಚರಿಕೆ ನೀಡಿದರು. ಸ್ಮಶಾನ ಹೋರಾಟ ಸಮಿತಿಯ ಪದಾಧಿಕಾರಿ ಟಿ.ಟಿ.ಉದಯಕುಮಾರ್, ಸಂಚಾಲಕ ಹೆಚ್.ಬಿ.ರಮೇಶ್, ಪ್ರಭಾಕರ, ಸುರೇಶ್, ಸಂದೀಪ್, ಮುಕುಂದ, ಮಣಿ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ನಂಜುಂಡಸ್ವಾಮಿ ಅವರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಸ್ಮಶಾನ ಜಾಗದ ಕುರಿತು ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಗ್ರಾಮ ಆಡಳಿತ ಅಧಿಕಾರಿ ಸಚಿನ್ ಕುಲಕರ್ಣಿ ಹಾಜರಿದ್ದರು.










