
ಮಡಿಕೇರಿ ಜೂ.17 NEWS DESK : ಬೆಂಗಳೂರು ಕಾಲ್ತುಳಿತದ ದುರಂತ ಘಟನೆಯ ಹೊಣೆಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಆರ್‍ಸಿಬಿ ತಂಡ ಐಪಿಎಲ್‍ನಲ್ಲಿ ಜಯಗಳಿಸಿದ ಹಿನ್ನೆಲೆ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ವಿಜಯೋತ್ಸವವನ್ನು ಆಯೋಜಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಹದಗೆಡುವ ಕುರಿತು ಸರ್ಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದರೂ ಅವರ ಮಾತನ್ನು ಲೆಕ್ಕಿಸದ ಸರ್ಕಾರ ವಿಜಯೋತ್ಸವ ಆಚರಿಸಿ 11 ಮಂದಿ ಅಮಾಯಕರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು. ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಖಂಡನೀಯ. ಕಾಂಗ್ರೆಸ್ಸಿಗರ ರಾಜಕೀಯದಾಟಕ್ಕೆ ಪ್ರಮಾಣಿಕ ಪೊಲೀಸ್ ಅಧಿಕಾರಿಗಳು ಅಮಾನತಿನ ಶಿಕ್ಷೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಟೀಕಿಸಿದ ಅವರು, ತಕ್ಷಣ ಸಿಎಂ ಹಾಗೂ ಡಿಸಿಎಂ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಯಾವುದೇ ಪೂರ್ವ ತಯಾರಿ ಇಲ್ಲದೆ ಏಕಾಏಕಿ ಕಾರ್ಯಕ್ರಮ ಆಯೋಜನೆ ಮಾಡಿದ್ದದರಿಂದ 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಿದರು. ಪ್ರಕರಣದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಸಭೆ ಅಧ್ಯಕ್ಷೆ ಕಲಾವತಿ, ಬಿಜೆಪಿ ವಕ್ತಾರರಾದ ಬಿ.ಕೆ.ಅರುಣ್ ಕುಮಾರ್, ಕಾಂಗೀರ ಸತೀಶ್, ಮಡಿಕೇರಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಉಪಾಧ್ಯಕ್ಷ ಬಿ.ಕೆ.ಜಗದೀಶ್, ಎಸ್‍ಸಿ ಮೋರ್ಚಾದ ಅಧ್ಯಕ್ಷ ಪಿ.ಎಂ.ರವಿ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರಾದ ಅರುಣ್ ಶೆಟ್ಟಿ, ಮನು ಮಂಜುನಾಥ್, ನಾಗೇಶ್ ಕುಂದಲ್ಪಾಡಿ, ಎಸ್.ಸಿ.ಸತೀಶ್, ಬೊಳ್ಳಜಿರ ಬಿ.ಅಯ್ಯಪ್ಪ, ಕವನ್ ಕಾವೇರಪ್ಪ ಸಬಿತಾ, ಕನ್ನಿಕೆ, ಡೀನ್ ಬೋಪಣ್ಣ, ಸಜಿಲ್ ಕೃಷ್ಣನ್, ಚಂದ್ರ, ನಗರಸಭೆಯ ಬಿಜೆಪಿ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಸಲ್ಲಿಸಿದರು.










