
ಕುಶಾಲನಗರ ಜೂ.17 NEWS DESK : ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಹಾನಿಯಾದ ಘಟನೆ ಕುಶಾಲನಗರದ ಟೌನ್ ಕಾಲೋನಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರದ ಪತ್ರಕರ್ತ ಎಚ್.ಸಿ.ಜಯಪ್ರಕಾಶ್ ಅವರ ಮನೆಯು ಹಾನಿಯಾಗಿದ್ದು, ಮಕ್ಕಳು ಕೂದಲೆಳೆಯಿಂದ ಪಾರಾಗಿದ್ದಾರೆ. ಸುಮಾರು 60 ವರ್ಷ ಹಳೆಯ ಮನೆಯಾದ್ದರಿಂದ ನಿರಂತರ ಮಳೆ ಬಿದ್ದ ಕಾರಣ ಮನೆ ಗೋಡೆಗಳು ಸಂಪೂರ್ಣ ಹಾನಿಯಾಗಿ ಗೋಡೆ ಕುಸಿದು ಬಿದ್ದಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದ ಸಂದರ್ಭ, ಶಿಥಿಲಗೊಂಡಿದ್ದ ಗೋಡೆ ಅಧಿಕಾರಿಗಳ ಎದುರೇ ಕುಸಿದು ಬಿದ್ದಿದೆ. ಅದೃಷ್ಠವಷಾತ್ ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಸ್ಥಳೀಯ ವಾರ್ಡ್ ಸದಸ್ಯ ಜಯವರ್ಧನ್ ಮಾತನಾಡಿ, ಕುಶಾಲನಗರದ ಟೌನ್ ಕಾಲೋನಿಯಲ್ಲಿ ಮಳೆಯಿಂದ ಮನೆಗೆ ಹಾನಿಯಾಗಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮನೆ ವಾಸಿಸಲು ಯೋಗ್ಯವಿಲ್ಲದ ಕಾರಣ ಪುರಸಭೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಸರ್ಕಾರ ಕೂಡಾ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಪತ್ರಕರ್ತ ಎಚ್.ಸಿ.ಜಯಪ್ರಕಾಶ್ ಮಾತನಾಡಿ, ಮಳೆಯಿಂದ ಮನೆಗೆ ತೀವ್ರ ಹಾನಿಯಾಗಿದೆ. ಹಳೆಯ ಮನೆಯಾದ ಕಾರಣ ಮಳೆಯಿಂದ ಮನೆಗೆ ಹಾನಿಯಾಗಿದೆ. ಅನಾಹುತದಿಂದ ನನ್ನ ಮಕ್ಕಳು ಕೂದಲೆಳೆಯಿಂದ ಪಾರಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ಆನಂದ್ ಕುಮಾರ್, ಗ್ರಾಮ ಲೆಕ್ಕಿಗ ಸಂತೋಷ್, ಪುರಸಭೆ ಕಂದಾಯ ಅಧಿಕಾರಿ ರಾಮು, ಪುರಸಭೆ ಸಿಬ್ಬಂದಿಗಳಾದ ರಾಘವ್, ಧನಂಜಯ, ಗೆಳೆಯರ ಬಳಗದ ಪ್ರಮುಖರಾದ ಎಚ್.ಟಿ.ವಸಂತ್, ಅಯ್ಯೂಬ್, ಆದಂ, ಮಹದೇವ್, ರಜ಼ಾಕ್, ಚಂದ್ರು, ಕಮರುದ್ದೀನ್, ವೆಂಕಟೇಶ್, ನರೇಂದ್ರ, ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ನಿರ್ದೇಶಕರಾದ ಟಿ.ಆರ್.ಪ್ರಭುದೇವ್, ಶಿವರಾಜ್, ಮುಸ್ತಫ, ಕೆ.ಬಿ.ಶಂಶುದ್ಧೀನ್ ಹಾಗೂ ಸ್ಥಳೀಯ ನಿವಾಸಿಗಳಾದ ಕೆ.ಬಿ.ರಾಜು ಹಾಜರಿದ್ದರು.









