
ಮಡಿಕೇರಿ ಜೂ.18 NEWS DESK : ಖಾಸಗಿ ಜಮೀನುಗಳಲ್ಲಿರುವ ಎಲ್ಲಾ ಕಾಡಾನೆಗಳನ್ನು ಸೆರೆ ಹಿಡಿದು ಅರಣ್ಯ ಆವಾಸಸ್ಥಾನಗಳಿಗೆ ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಎನ್ವಿರಾನ್ಮೆಂಟ್ ಅಂಡ್ ಹೆಲ್ತ್ ಫೌಂಡೇಶನ್‍ನ ಸ್ಥಾಪಕ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮೀತಿಮಿರಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಅರಣ್ಯ ಸಚಿವರು ಕ್ರಮ ಕೈಗೊಳ್ಳಬೇಕು ಎಂದರು. ಕಾಡಾನೆಗಳ ನಿಯಂತ್ರಣಕ್ಕೆ ಅವುಗಳಿಗೆ ಆಹಾರ ಮತ್ತು ನೀರಿನ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ತಂತಿ ಬೇಲಿಗಳ ರೂಪದಲ್ಲಿ ಬ್ಯಾರಿಕೇಡ್‍ಗಳ ಆವರಣಗಳನ್ನು ರಚಿಸಬೇಕು. ನೀರು ಲಭ್ಯತೆ ಇರುವ ಅರಣ್ಯ ಪ್ರದೇಶಗಳಿಗೆ ಕಾಡಾನೆಗಳನ್ನು ಬಿಡಬೇಕು, ಅರಣ್ಯ ಗಡಿಯಲ್ಲಿರುವ ಬ್ಯಾರಿಕ್ಯಾಡ್ ಗಳನ್ನು ಮೇಲ್ದರ್ಜೆಗೇರಿಸಿ ನಿರ್ವಹಣೆಗೆ ಆಯಾ ಗಾಮ ಪಂಚಾಯತ್ ಗಳ ಸಹಭಾಗಿತ್ವ ಪಡೆದುಕೊಳ್ಳಬೇಕು, ಕಾಡಾನೆಗಳ ಸುರಕ್ಷಿತ ತಾಣಗಳನ್ನು ತೆರೆಯಬೇಕು ಮತ್ತು ಆನೆ ಕಾರಿಡಾರ್ ಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಹುಲಿ ಸುರಕ್ಷಿತ ಪ್ರದೇಶದ ಹೊರವಲಯದಲ್ಲಿರುವ ಏಳು ವರ್ಷ ಮೇಲ್ಪಟ್ಟ ಎಲ್ಲಾ ಹುಲಿಗಳಿಗೆ ಕೊರಳಪಟ್ಟಿ ಅಳವಡಿಸಬೇಕು, ಕರ್ನಾಟಕ ಅರಣ್ಯ ಇಲಾಖೆಗೆ ಹೆಚ್ಚಿನ ಬಜೆಟ್ ಹಂಚಿಕೆ ಮಾಡಬೇಕು, ಕೊಡಗು ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ಅರಣ್ಯ ಆವಾಸಸ್ಥಾನಗಳಲ್ಲಿ ಯಾವುದೇ ಹೆಚ್ಚಿನ ಯೋಜನೆಗಳಿಗೆ ಮಿತಿಯನ್ನು ಹೇರುವ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಕರ್ನಲ್ ಚೆಪ್ಪುಡಿರ ಮುತ್ತಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎನ್ವಿರಾನ್ಮೆಂಟ್ ಅಂಡ್ ಹೆಲ್ತ್ ಫೌಂಡೇಶನ್ ನ ಪ್ರಮುಖರಾದ ಶ್ಯಾಂ ಬೋಪಯ್ಯ, ಗೋಪಿನಾಥ್ ಹಾಗೂ ಕಾಳಯ್ಯ ಉಪಸ್ಥಿತರಿದ್ದರು.











