


ಸುಂಟಿಕೊಪ್ಪ ಜೂ.19 NEWS DESK : ನಮ್ಮ ಕಾಲದಲ್ಲಿ ಶಿಕ್ಷಣಕ್ಕೆ ಪೋಷಕರೇ ಒತ್ತು ನೀಡಬೇಕಾಗಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಂದು ಮಗು ಶಿಕ್ಷಣವನ್ನು ಪಡೆಯಬೇಕೆಂಬ ನಿಯಮದಡಿಯಲ್ಲಿ ಸರಕಾರ ಪಠ್ಯ ಪುಸ್ತಕ ಹಾಗೂ ದಾನಿಗಳು ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಆಶಾದಾಯಕ ವಿಚಾರ. ಮಕ್ಕಳು ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ಶಿಕ್ಷಣದತ್ತ ಗಮನ ಹರಿಸುವಂತೆ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರೌಢಶಾಲೆ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ದಾನಿಗಳಾದ ಪಿ.ಎಂ.ಲತೀಫ್ ಅವರು ನೀಡಿರುವ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳದ್ದಂತೆ ಸರಕಾರ ಹಾಗೂ ದಾನಿಗಳು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಉತ್ತಮ ಬೆಳವಣಿಗೆ ಮಕ್ಕಳು ಶಿಕ್ಷಣ ಪಡೆದು ಸಮಾಜದ ಉತ್ತಮ ಪ್ರಜೆಗಳಾಗಿ ಮೂಡಿಬರುವ ಮೂಲಕ ಪೋಷಕರು ಮತ್ತು ತಾವು ಕಲಿತ ಶಾಲೆಯನ್ನು ಉತ್ತುಂಗ ಶಿಖರಕ್ಕೆ ಏರಿಸುವಂತಾಗಬೇಕು. ಶಾಲೆಯಲ್ಲಿ ಹಂತ ಹಂತವಾಗಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸುತ್ತ ಮುತ್ತಲಿನ ಗ್ರಾಮದ ವಿದ್ಯಾರ್ಥಿಗಳ ಭವಿಷ್ಯದ್ ದೃಷ್ಟಿಯಿಂದ ಈ ಗ್ರಾಮದ ಹಿರಿಯರು ಶ್ರಮವಹಿಸಿ ಕಟ್ಟಿಸಿದ ಪ್ರಾಥಮಿಕ ಸರಕಾರಿ ಶಾಲೆಯನ್ನು ಉಳಿಯುವಂತಾಗಬೇಕು. ಶಿಕ್ಷಕರೊಂದಿಗೆ ಪೋಷಕರು, ಗ್ರಾಮಸ್ಥರು ಸಹಕರಿಸುವಂತೆ ಮನವಿ ಮಾಡಿದರು. ಗ್ರಾಮದಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿದ್ದು, ಈ ಸುಸ್ಸಜಿತವಾದ ವಿದ್ಯಾರ್ಥಿ ನಿಲಯವನ್ನು ಉಳಿಸುವಲ್ಲಿ ಮುಖಂಡರು ಹಾಗೂ ಗ್ರಾಮಸ್ಥರು ಕೈ ಜೋಡಿಸುವಂತೆ ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಪುಸ್ತಕ ವಿತರಣಾ ದಾನಿಗಳಾದ ಪಿ.ಎಂ.ಲತೀಫ್ ಮಾತನಾಡಿ, ಸರಕಾರ ಸೇರಿದಂತೆ ದಾನಿಗಳು ಶಿಕ್ಷಣಕ್ಕೆ ಸಹಾಯಹಸ್ತ ನೀಡುತ್ತಿದ್ದು, ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿಯೂ ಶಿಕ್ಷಣ ಸಂಸ್ಥೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಭರವಸೆ ನೀಡಿದರಲ್ಲದೆ. ಬಾಲಕರ ವಿದ್ಯಾರ್ಥಿ ನಿಲಯವನ್ನು ಮುಚ್ಚುತ್ತಿರುವುದ್ದರಿಂದ ಈ ಬಾಗದ ವಿದ್ಯಾರ್ಥಿಗಳಿಗೆ ತೀವ್ರ ಹಿನ್ನಡೆ ಉಂಟಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಈ ವಿದ್ಯಾರ್ಥಿನಿಲಯವನ್ನು ಮುಚ್ಚದಂತೆ ಲತೀಫ್ ಆಗ್ರಹಿಸಿದರು. ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಅಧ್ಯಕ್ಷ ಎಂ.ಎಸ್.ಸುನಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಅನಿತಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಆರ್.ಎಚ್.ಶರೀಫ್, ಸಿ.ಮಹೇಂದ್ರ, ಬಿ.ಕೆ.ಮೋಹನ್, ವಾಸು,ಎಸ್.ಪಿ.ಸಂದೀಫ್, ರಜಾಕ್, ಹರೀಶ್, ಅಜೀಜ್, ಶಶಿಕುಮಾರ್ ರೈ,ಶಾಲಾ ಮುಖ್ಯೋಪಾದ್ಯಾಯನಿ ಹೇಮಾವತಿ ಸಹಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಲಾ ಮಕ್ಕಳಿಗೆ ನೋಟ್ ಪುಸ್ತಕವನ್ನು ವಿತರಿಸಲಾಯಿತು.









