




ಮಡಿಕೇರಿ ಜೂ.20 NEWS DESK : ಬಡವರ ಮತ್ತು ಹಿಂದುಳಿದ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಅಭಿವೃದ್ಧಿಯನ್ನು ಗುರಿಯಾಗಿಸಿ ಸುಸ್ಥಿರ ಸಮಾಜ ಮತ್ತು ಸಬಲೀಕರಣ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಿದ್ರಾ ಫೌಂಡೇಶನ್‌ನ ವಾರ್ಷಿಕ ಸಭೆಯು ಮೇಕೇರಿಯಲ್ಲಿ ನಡೆಯಿತು. ಸಭೆಯಲ್ಲಿ ಖ್ಯಾತ ಚಿಂತಕ ಹಾಗೂ ವಾಗ್ಮಿ ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ ಮಾತನಾಡಿ, ಆಧುನಿಕ ಕಾಲದಲ್ಲಿನ ಸಮಾಜ ಸೇವೆ ಮತ್ತು ನೈತಿಕ ಶಿಕ್ಷಣದ ಅವಶ್ಯಕತೆ ಹಾಗೂ ಮಹತ್ವಗಳ ಬಗ್ಗೆ ಆಳವಾಗಿ ಬೋಧಿಸಿದರು. ದಿನನಿತ್ಯ ಹಸಿವನ್ನು ನೀಗಿಸುವ ಸಿದ್ರಾ ಫೌಂಡೇಶನ್ ಶಿಕ್ಷಣವನ್ನು ಕೊಟ್ಟು ಪ್ರಬುದ್ಧ ಸಮಾಜವನ್ನು ನಿರ್ಮಿಸಿ ದೇಶ ಸೇವೆಯಲ್ಲಿ ತೊಡಗಿಕೊಂಡ ಬಗೆಯನ್ನು ಕೊಂಡಾಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ರಾ ಫೌಂಡೇಶನ್ ಸಂಸ್ಥಾಪಕ ಶಿಹಾಬುದ್ದೀನ್ ನೂರಾನಿ, ಸಿದ್ರಾ ಫೌಂಡೇಶನ್ ಅಧೀನದಲ್ಲಿ ಮಹಾರಾಷ್ಟ್ರದ ಪುಣೆ, ಹಿಂಗೋಳಿ, ಉಮರ್ಖೆಡ್ ಹಾಗೂ ಕರ್ನಾಟಕದ ಬಾಗಲಕೋಟೆ, ಬಾದಾಮಿ ಮುಂತಾದ ವಿವಿಧ ಭಾಗಗಳ ಒಟ್ಟು 6 ಸಮನ್ವಯ ವಿದ್ಯಾ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸೇಫ್ ವಾಟರ್ ಯೋಜನೆಯಡಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮರ್ಸಿ ವ್ಯಾನ್ ಯೋಜನೆಯ ಮೂಲಕ ಸಾವಿರಾರು ಜನರಿಗೆ ಉಚಿತ ಆಹಾರ ವಿತರಣೆ, ಪುಟಾಣಿ ಮಕ್ಕಳ ಶಿಕ್ಷಣ ಮತ್ತು ಏಳಿಗೆಗಾಗಿ ಸಿದ್ರಾ ಕಿಡ್ಸ್ ಪ್ರೀ ಸ್ಕೂಲ್ ನೆಟ್ವರ್ಕ್, ಸಿದ್ರಾ ಅಕಾಡೆಮಿ, ಸಿದ್ರಾ ಪ್ರೈಮರಿ ಎಜ್ಯುಕೇಶನ್ ಸೆಂಟರ್ ಮುಂತಾದ ಹಲವು ಯೋಜನೆಗಳು ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಉತ್ತರಪ್ರದೇಶ, ಬಿಹಾರ ಮತ್ತು ಇನ್ನಿತರೆ ರಾಜ್ಯಗಳಲ್ಲೂ ಸಂಘದ ಕಾರ್ಯಚಟುವಟಿಕೆಗಳು ಬಹಳ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಿರ್ದೇಶಕರಾದ ಉನೈಸ್ ನೂರಾನಿ ಹಾಗೂ ಸಂಘದ ವಿವಿಧ ರಾಜ್ಯಗಳ ನಾಯಕರು, ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮುಂದಿನ ವರ್ಶಾವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿನ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಚರ್ಚಿಸಿ ಹಲವಾರು ಪರಿಣಾಮಕಾರಿ ಯೋಜನೆಗಳಿಗೆ ರೂಪುರೇಷೆ ತಯಾರಿಸಲಾಯಿತು. ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿನಿಧಿಗಳಿಗೆ ವಿಶೇಷ ತರಬೇತಿ ನೀಡಲಾಯಿತು. ನೂತನ ಕಾರ್ಯಕಾರಿ ಸಮಿತಿ ರಚನೆ :: ಸಿದ್ರಾ ಫೌಂಡೇಶನ್ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಿ ಅಧಿಕೃತವಾಗಿ ಘೋಷಿಸಲಾಯಿತು. ಪ್ರಧಾನ ನಿರ್ದೇಶಕರಾಗಿ ಅಬ್ದುಲ್ ಶುಕೂರ್ ನುರಾನಿ ಅಸ್ಸಖಾಫಿ ಪುಣೆ, ಕಾರ್ಯನಿರ್ವಾಹಕ ನಿರ್ದೇಶಕರಾಗಿ ಫಾರೂಖ್ ನೂರಾನಿ ಅಸ್ಸಖಾಫಿ ಬಾಗಲಕೋಟೆ, ಮುಖ್ಯ ಕಾರ್ಯನಿರ್ವಾಹಕರಾಗಿ ಶರೀಫ್ ನೂರಾನಿ ಸಖಾಫಿ ಪುಣೆ ಹಾಗೂ ಸಿ.ಎಫ್.ಓ ಆಗಿ ಶಮೀರ್ ನೂರಾನಿ ಸಖಾಫಿ ಬಾಗಲಕೋಟೆಯವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಸೋಷಿಯಲ್ ವೆಲ್ಫೇರ್, ಶಿಕ್ಷಣ, ಮಾರ್ಗದರ್ಶನ, ಕಾನೂನು ಸಲಹೆ ಸೇರಿದಂತೆ ವಿವಿಧ ವಿಭಾಗಗಳಿಗೆ ನಾಯಕರನ್ನು ನೇಮಿಸಲಾಯಿತು.









