
ಕುಶಾಲನಗರ ಜೂ.21 NEWS DESK : ಕೊಡಗು ಸೈನಿಕ ಶಾಲೆಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಶೀರ್ಷಿಕೆಯಡಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎನ್‌ಸಿಸಿ ಘಟಕದ ವತಿಯಿಂದ ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸಿ.ಎಚ್.ಎಮ್ ಅನೂಪ್ ಚೌಹಾನ್ ಯೋಗಾಸನದ ವಿವಿಧ ಆಸನಗಳ ಪ್ರದರ್ಶನ ನೀಡಿ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು. ಯೋಗಾಸನವು ಆರೋಗ್ಯದಲ್ಲಿ ಸ್ಥಿರತೆ, ಶಿಸ್ತು ಹಾಗೂ ಆನಂದಮಯ ಜೀವನಕ್ಕೆ ಅತಿ ಅವಶ್ಯಕವೆಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಅಗತ್ಯತೆಯೊಂದಿಗೆ ಪ್ರಕೃತಿಯೊಂದಿಗೆ ಸಹ-ಜೀವನ ನಡೆಸಬೇಕೆನ್ನುವ ಜಾಗೃತಿಯನ್ನು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಎನ್.ಸಿ.ಸಿ ಜೆಡಿ ಕಂಪನಿಯ ಕಮಾಂಡಿಂಗ್ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಉಪಪ್ರಾಂಶುಪಾಲರು, ಎನ್‌ಸಿಸಿ ಘಟಕದ ಅಧಿಕಾರಿಗಳು ಹಾಗೂ ಶಾಲಾ ವೈದ್ಯಾಧಿಕಾರಿ ಡಾ. ಚಿನ್ಮಯ್ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಬೋಧಕ-ಬೋಧಕೇತರ ವರ್ಗದವರು, ಎನ್‌ಸಿಸಿ ಸಿಬ್ಬಂದಿ ವರ್ಗ ಹಾಜರಿದ್ದರು.










