
ಮಡಿಕೇರಿ ಜೂ.21 NEWS DESK : ವಿವಿಧ ಭ್ರಷ್ಟಾಚಾರದ ಪ್ರಕರಣಗಳು ಸಾಬೀತಾಗುತ್ತಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿದು ಚುನಾವಣೆಯನ್ನು ಎದುರಿಸಲಿ ಎಂದು ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಇದು ಸಾಬೀತಾಗುತ್ತಿದ್ದರೂ ಅಧಿಕಾರದಲ್ಲಿ ಮುಂದುವರಿದಿರುವ ಸರ್ಕಾರ ಭಂಡ ಸರ್ಕಾರವೆಂದು ಆರೋಪಿಸಿದರು. ರಾಜ್ಯದ ವಾಲ್ಮೀಕಿ ಅಭಿವೃದ್ಧಿ ಮಂಡಳಿಯಲ್ಲಿ ಹಗರಣವಾಗಿರುವುದನ್ನು ಸರ್ಕಾರವೆ ಒಪ್ಪಿಕೊಂಡಿದೆ, ಮುಡಾ ಹಗರಣ ಮುಖ್ಯಮಂತ್ರಿಗಳಿಗೆ ಸುತ್ತಿಕೊಳ್ಳುತ್ತಿರುವ ಹಂತದಲ್ಲೆ, ಮುಡಾದಿಂದ ಪಡೆದ ನಿವೇಶನಗಳನ್ನು ಹಿಂದಕ್ಕೆ ನೀಡುವ ಮೂಲಕ ಮಗದೊಮ್ಮೆ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ. ಇದೀಗ ವಸತಿ ಯೋಜನೆಯಡಿ ಮನೆಗಳಿಗಾಗಿ ಲಂಚ ಪಡೆಯುವ ವಿಚಾರ ಅವರದೇ ಸರ್ಕಾರದ ಶಾಸಕರಾದ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರ ಆಡಿಯೋದಿಂದ ಬಹಿರಂಗಗೊಂಡಿದೆ ಎಂದು ಲೇವಡಿ ಮಾಡಿದರು. ಬೆಂಗಳೂರು ಕೊಡವ ಸಮಾಜಕ್ಕೆ ಈ ಹಿಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರ ಅವಧಿಯಲ್ಲೆ ಜಾಗ ಗುರುತಿಸುವ ಕಾರ್ಯವಾಗಿತ್ತು. ಜಾಗ ಮಾಡುವ ನಿಟ್ಟಿನಲ್ಲಿ ಅಂದಿನ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಇವೆಲ್ಲವನ್ನು ಬದಿಗೆ ಸರಿಸಿರುವ ಕಾಂಗ್ರೆಸ್, ಇದನ್ನು ತಾನೇ ಮಾಡಿದ್ದೆಂದು ಲಾಭ ಪಡೆಯುವ ಪ್ರಯತ್ನ ಮಾಡಿದೆ. ಕೊಡವ ಸಮಾಜಗಳ ಒಕ್ಕೂಟವು ಹಿಂದಿನ ಅವಧಿಯಲ್ಲಿ ಜಾಗ ಒದಗಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳನ್ನು ಸ್ಮರಿಸದಿರುವುದು ಬೇಸರ ತಂದಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಕಳೆದ ಎರಡು ಆರ್ಥಿಕ ಸಾಲಿನಲ್ಲಿ ಎನ್‍ಡಿಆರ್‍ಎಫ್ ಮೂಲಕ ಒಟ್ಟು 39 ಕೋಟಿ ರೂ.ಗಳನ್ನು ಕೊಡಗಿಗೆ ಒದಗಿಸಿದೆ. ಇದರಿಂದ ನಡೆಯುತ್ತಿರುವ ಕಾಮಗಾರಿಗಳ ಭೂಮಿ ಪೂಜೆಯನ್ನು ಕಾಂಗ್ರೆಸ್ಸಿಗರು ನಡೆಸುವ ಮೂಲಕ, ಅನುದಾನ ತಂದವರು ತಾವೇ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಇಂದು ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಧರ್ಮ ಆಧಾರಿತ ರಾಜಕೀಯ ನಡೆಸುತ್ತಿದೆ. ಇಂದು ಮುಸ್ಲಿಂ ಸಮುದಾಯಕ್ಕೆ ವಸತಿ ಯೋಜನೆಗಳಲ್ಲಿ ಶೇ.15 ರಷ್ಟು ಮೀಸಲಾತಿಯನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಇದು ಒಂದು ಸಮುದಾಯವನ್ನು ಮಾತ್ರ ಮೆಚ್ಚಿಸುವ ಪ್ರಯತ್ನವೆಂದು ಟೀಕಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ಇದೀಗ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ವರ್ಗವನ್ನು ಓಲೈಸುವ ಪ್ರಯತ್ನಗಳಿಂದ ಇತರೆ ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ಹಾಗೂ ಮಾಧ್ಯಮ ವಕ್ತಾರ ಸಜಿಲ್ ಕೃಷ್ಣ ಉಪಸ್ಥಿತರಿದ್ದರು.









