

ಮಡಿಕೇರಿ NEWS DESK ಜು.8 : ದಕ್ಷಿಣ ಕೊಡಗಿನ ನೋಕ್ಯ ಮತ್ತು ಭದ್ರಗೋಳ ಗ್ರಾಮದಲ್ಲಿ ಹಸುಗಳನ್ನು ಹಾಗೂ ಎಮ್ಮೆಯೊಂದನ್ನು ಕಳ್ಳತನ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಜಿಲ್ಲಾ ಪೊಲಿಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಉಬೈದ್ ಕೆ.ಎಂ.(37), ಪೊನ್ನಂಪೇಟೆ ಸೀತಾ ಕಾಲೋನಿಯ ಗಜನ್ ಗಣಪತಿ(25), ಬೇಗೂರು ಗ್ರಾಮದ ಹನೀಫ ಸಿ.ಈ.(36) ಹಾಗೂ ಕೇರಳದ ಮಾನಂದವಾಡಿಯ ಅಜನಸ್(21) ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಬೊಲೇರೋ ಪಿಕಪ್, ಮಾರುತಿ ಓಮ್ನಿ, ಟಾಟಾ ಇಂಟ್ರಾ, ಒಂದು ಚಾಕು ಮತ್ತು ಹಗ್ಗ, 3 ಮೊಬೈಲ್ ಮತ್ತು 7 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಜೂ.24 ರಂದು ನೋಕ್ಯ ಗ್ರಾಮದ ಆನಂದ ಎ.ಎಸ್. ಎಂಬುವವರ ತೋಟದ ಕೊಟ್ಟಿಗೆಯಲ್ಲಿದ್ದ 2 ಹಸುಗಳನ್ನು ಮತ್ತು ಭದ್ರಗೋಳ ಗ್ರಾಮದ ಪಿ.ಪಿ.ಮುತ್ತಣ್ಣ ಎಂಬುವವರ ಮನೆಯ ಕೊಟ್ಟ್ಟಿಗೆಯಲ್ಲಿದ್ದ ಎಮ್ಮೆಯೊಂದನ್ನು ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಡಿವೈಎಸ್‌ಪಿ ಮಹೇಶ್ ಕುಮಾರ್, ಸಿಪಿಐ ಶಿವರಾಜ ಆರ್. ಮುಧೋಳ್, ಗೋಣಿಕೊಪ್ಪಲು ಪಿಎಸ್‌ಐ ಪ್ರದೀಪ್ ಕುಮಾರ್ ಬಿ.ಕೆ. ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಪ್ರಕರಣದ ಕುರಿತು ತನಿಖೆ ಕೈಗೊಂಡಿತ್ತು. ಕೇರಳ ಮತ್ತು ಕೊಡಗು ಜಿಲ್ಲೆಯ ಕಾನೂರಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.








