
ಮಡಿಕೇರಿ NEWS DESK ಜು.15 : ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಕಾಣೆಯಾಗಿದ್ದ ಮಡಿಕೇರಿ ತಾಲ್ಲೂಕಿನ ಅರೆಕಾಡು ಗ್ರಾಮದ ನಿವಾಸಿ ಕೆ.ಎನ್.ರಘು (38) ಅವರ ಮೃತದೇಹ ಪತ್ತೆಯಾಗಿದೆ. ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕ್ರಿಟಿಕಲ್ ಕೇರ್ ಕಟ್ಟಡದ ನೀರು ತುಂಬಿದ ಗುಂಡಿಯಲ್ಲಿ ರಘು ಅವರ ಮೃತದೇಹ ದೊರೆತ್ತಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ರಘು ಅವರನ್ನು ಅವರ ತಾಯಿ ರತ್ನ ಹಾಗೂ ಪತ್ನಿ ರಾಜೇಶ್ವರಿ ಅವರು ಜು.8 ರಂದು ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಜು.11 ರಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿನಲ್ಲಿ ತಾಯಿಯ ಬಳಿಯಿಂದ 200 ರೂ. ಪಡೆದ ರಘು ಅವರು ಕಾಫಿ ಹಾಗೂ ತಿಂಡಿಯನ್ನು ತರಲು ಹೊಟೇಲ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮರಳಿರಲಿಲ್ಲ, ಅಲ್ಲದೆ ಮನೆಗೂ ಬಂದಿರಲಿಲ್ಲ. ಇದರಿಂದ ಆತಂಕಗೊAಡ ಪತ್ನಿ ರಾಜೇಶ್ವರಿ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.








