
ಮಡಿಕೇರಿ NEWS DESK ಜು.30 : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ನಗರದಲ್ಲಿ ಸುಮಾರು 50 ಕ್ಕೂ ಅಧಿಕ ಗಣೇಶೋತ್ಸವ ಸಮಿತಿಗಳು ಗಣೇಶನ ಮೂರ್ತಿಯ ಪ್ರತಿಷ್ಠಾಪನೆಯ ಸಿದ್ಧತೆಯಲ್ಲಿವೆ. ಗಣೇಶ ಚತುರ್ಥಿಯನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಅಗತ್ಯ ಮಾರ್ಗಸೂಚಿಗಳನ್ನು ತಿಳಿಸಲು ಕೊಡಗು ಪೊಲೀಸರು ಗೌರಿ ಗಣೇಶೋತ್ಸವ ಆಯೋಜಕರ ಸಭೆಯನ್ನು ನಡೆಸಿದರು.
ನಗರದ ಕಾವೇರಿ ಹಾಲ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪರಿಸರ ಮತ್ತು ಶಬ್ಧ ಮಾಲಿನ್ಯಕ್ಕೆ ಅವಕಾಶ ನೀಡದೆ ಸಂಪ್ರದಾಯಕ್ಕೆ ಒತ್ತು ನೀಡಿ ಕಾನೂನಿನ ಚೌಕಟ್ಟಿನಡಿ ಹಬ್ಬಗಳನ್ನು ಆಚರಣೆ ಮಾಡುವಂತೆ ಮನವಿ ಮಾಡಿದರು. ಡಿಜೆ ಶಬ್ಧ ನಿಯಮ ಮೀರಿದರೆ ಅಥವಾ ಶಬ್ಧ ಮಾಲಿನ್ಯವಾದರೆ ಡಿಜೆ ಪರಿಕರಗಳನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್, ಡಿವೈಎಸ್‌ಪಿ ಸೂರಜ್, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್ ಮತ್ತಿತರ ಪೊಲೀಸ್ ಅಧಿಕಾರಿಗಳು, ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.









