
ಸುಂಟಿಕೊಪ್ಪ ಸೆ.9 NEWS DESK : ಶ್ರೀ ನಾರಾಯಣ ಗುರುಗಳ ಬದಕು ಮತ್ತು ಬೋಧನೆ ಇಂದಿಗೂ ಪ್ರಸ್ತುತ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹೇಳಿದರು. 7ನೇ ಹೊಸಕೋಟೆಯ ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ ಟ್ರಸ್ಟ್, ಎಸ್‍ಎನ್‍ಡಿಪಿ ಶಾಖೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ವನಿತಾ ಸಮಿತಿ ಮತ್ತು ಯೂತ್ ಕಮಿಟಿ ಆಶ್ರಯದಲ್ಲಿ ಆಯೋಜಿಸಲಾದ ನಾರಾಯಣಗುರು ಜಯಂತಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಕೆಲವು ಸಂದರ್ಭಗಳಲ್ಲಿ ನಾರಾಯಣ ಗುರುಗಳ ಹೋರಾಟ ಗುರಿ ಸೇರಿದೆಯೇ ಎಂಬುದರ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದು ಅವರು ಹೇಳಿದರು. ಶಾಸಕರ ನಿಧಿಯಿಂದ ಗರಿಷ್ಠ 10 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ರಾಜಕಾರಣಿಗಳು ತಮ್ಮ ಕಾರ್ಯಸಾಧನೆಗೆ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಅದಕ್ಕೆ ಬಲಿಯಾಗದಿರಿ ಎಲ್ಲಾರೂ ಒಂದಾಗಿ ಒಗ್ಗಟಾಗಿ ಹೋಗೋಣ ಎಂದು ಅವರು ಕರೆ ನೀಡಿದರು. ಕೊಡಗು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕ ಮಾತನಾಡಿ, ಶಾಖೆಯು ಬೆಳೆದು ಬಂದ ಇತಿಹಾಸವನ್ನು ಮೆಲುಕುಹಾಕಿ ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಪುಣ್ಯ ಕ್ಷೇತ್ರವಾಗಿ ಹೊರಹೊಮ್ಮಲೆಂದು ಹಾರಿಸಿದರು. 1991 ರಷ್ಟು ಹಿಂದೆಯೇ ಟಿ.ಕೆ.ಸಾಯಿಕುಮಾರ್ ನೇತೃತ್ವದಲ್ಲಿ ಗುರು ಮಂದಿರ ಸ್ವಂತ ನಿವೇಶನ ಹೊಂದಿದ್ದು, ಇಂದಿನ ಶುಭ ಸಂದರ್ಭದಲ್ಲಿ ರೂ.ಒಂದು ಲಕ್ಷ ದೇಣಿಗೆಯನ್ನು ಘೋಷಣೆ ಮಾಡಿದ್ದಾರೆ ಎಂದು ರಮೇಶ್ ಪ್ರಕಟಿಸಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, 171 ವರ್ಷಗಳ ಹಿಂದೆಯೇ ಮುನ್ನುಡಿಯನ್ನು ನಾವೆಲ್ಲರೂ ಒಂದೇ ಎಂದು ಹೇಳಿದ ಮಹಾನುಬಾವ ಶ್ರೀ ನಾರಾಯಣ ಗುರುಗಳನ್ನು ಬಣ್ಣಿಸಿದರು. ಸರಕಾರದ ವತಿಯಿಂದ ವಿಧಾನಪರಿಷತ್ ಸದಸ್ಯರ ನಿಧಿಯಿಂದ ರೂ ಐದು ಲಕ್ಷ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. 7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ರೂ ಒಂದುವರೆ ಕೋಟಿ ವೆಚ್ಚದಲ್ಲಿ ಅನಾಥ ಆಶ್ರಮ ತಾನು ನಿರ್ಮಿಸುತ್ತಿದ್ದು ಆಶ್ರಯ ಕೋರಿ ಬರುವ ಎಲ್ಲರಿಗೂ ಅವಕಾಶ ಕಲ್ಲಿಸುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕೇರಳದ ಶ್ರೀ.ಶ್ರೀ. ಪ್ರೇಮಾನಂದ ಸ್ವಾಮೀಜಿಗಳು ಆರ್ಶಿವಚನ ನೀಡಿದರು. ಸಮಾಜ ಸೇವಕ ಎನ್.ವಿ.ಪದ್ಮನಾಭ ಮಾತನಾಡಿದರು ಮತ್ತು ಚಾರಿಟೆಬಲ್ ಟ್ರಸ್ಟ್‍ಗೆ ರೂ 50,000 ದೇಣಿಗೆಯನ್ನು ಘೋಷಿಸಿದರು. ವೇದಿಕೆಯಲ್ಲಿ 7ನೇ ಹೊಸಕೋಟೆಯ ನೂರುಲ್ ಮಸೀದಿ ಖತೀಬ್ ಆಶ್ರಫ್ ಸಖಾಫಿ, 7ನೇ ಹೊಸಕೋಟೆ ಗ್ರಾ.ಪಂ.ಅಧ್ಯಕ್ಷ ಇ.ಬಿ.ಜೋಸೆಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಶ್ರೀ ಮಹಾಗಣಪತಿ, ಗೋಪಾಲಕೃಷ್ಣ ದೇವಸ್ಥಾನ ಸಮಿತಿ ದಾಸಂಡ ರಮೇಶ್ ಚಂಗಪ್ಪ, ವಿ.ಎನ್.ಪದ್ಮನಾಭ, ಎಸ್.ಎನ್.ಡಿ.ಪಿ ಮಹಿಳಾ ವಿಭಾಗದ ಅಧ್ಯಕ್ಷೆ ವಿಲಾಸಿನಿ ಶೇಖರ್, ಕಾರ್ಯದರ್ಶಿ ನಿರ್ಮಲಾ ಪ್ರಕಾಶ್, ಯುವವಿಭಾಗದ ಅಧ್ಯಕ್ಷ ಕೆ.ಎಂ.ರಮೇಶ್, ಕಾರ್ಯದರ್ಶಿ ಕೆ.ಹೆಚ್.ಸುಜಿತ್ ಮತ್ತಿತರರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ದಾನಿಗಳಿಗೆ ಹಾಗೂ ಸಾಧಕಿ ಬಿಎಸ್‍ಎಫ್‍ನಲ್ಲಿ ಉಪನಿರೀಕ್ಷಕರಾಗಿ ನೇಮಕಗೊಂಡಿರುವ 7ನೇ ಹೊಸಕೋಟೆಯ ನಿವಾಸಿ ಕುಮಾರಿ ವಿಸ್ಮಯದಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎನ್.ಡಿ.ಪಿ 7ನೇ ಹೊಸಕೋಟೆಯ ಕಾರ್ಯದರ್ಶಿ ಕೆ.ಜೆ.ಶಿವನ್ ಸ್ವಾಗತಿಸಿದರು.








