
ಸಿದ್ದಾಪುರ ಆ.8 NEWS DESK : ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ದಾಳಿ ನಡೆಸಿದ್ದ ಸುಮಾರು 8 ವರ್ಷ ವಯಸ್ಸಿನ ಚಿರತೆಯನ್ನು ಶುಕ್ರವಾರ ಸಂಜೆ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಮೂಡಗದ್ದೆ ನಿವಾಸಿ ಗಣೇಶ್ ಅವರ ತೋಟದಲ್ಲಿ ಚಿರತೆ ಪತ್ತೆಯಾಗಿದ್ದು, ಮೂಡಗದ್ದೆ ರಾಮಕೃಷ್ಣ (ಜಯ ) ತೋಟದಲ್ಲಿ ಕೆಲಸಗಾರರನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಇವರ ಪತ್ನಿ ಲೀಲಾವತಿ (59) ಅವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಘಟನೆ ಬಳಿಕ ಸ್ಥಳದಲ್ಲಿ ಬೋನು ಇರಿಸಿ, ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಚಿರತೆಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿತ್ತು. ಚಿರತೆ ಗಾಯಗೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ವಿಶೇಷ ಶೋಧ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಚಿರತೆ ಪತ್ತೆಯಾದ ಬಳಿಕ ವೈದ್ಯಾಧಿಕಾರಿ ಡಾ. ರಮೇಶ್ ಅವರು ಡಾರ್ಟ್ ಮೂಲಕ ಅರವಳಿಕೆ ನೀಡಿ, ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಸೆರೆಹಿಡಿದರು. ಸೆರೆಸಿಕ್ಕ ಚಿರತೆಯನ್ನು ಆರೋಗ್ಯ ತಪಾಸಣೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿ ಆಧರಿಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಸಿಸಿಎಫ್ ಸೋನಾಲಿ ವೃಷ್ಣಿ, ಡಿಸಿಎಫ್ ಕಿರುಬನಂದನ್, ಎಸಿಎಫ್ ಮಂಜುನಾಥ್, ಆನೆಚೌಕೂರು ಆರ್‌ಎಫ್‌ಒ ಗಂಗಾಧರ್, ತಿತ್ತಿಮತಿ ಆರ್‌ಎಫ್‌ಒ ರಾಕೇಶ್, ಡಿಆರ್‌ಎಫ್‌ಒ ಶಶಿ ಪಿ.ಟಿ. ಪ್ರಶಾಂತ್, ನಾಗರಾಜು ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಪಾಲ್ಗೊಂಡಿದ್ದರು.









