
ವಿರಾಜಪೇಟೆ ಸೆ.10 NEWS DESK : ಆದಿವಾಸಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಕರೆ ನೀಡಿದರು. ಮಾಲ್ದಾರೆ ಸಮೀಪದ ಚೆನ್ನಂಗಿ ಗ್ರಾಮದ ಚೊಟ್ಟೆಪಾರೆ ಹಾಡಿಯಲ್ಲಿ ಶ್ರೀ ವರಸಿದ್ಧಿ ವಿನಾಯಕ ಉತ್ಸವ ಸಮಿತಿ ವತಿಯಿಂದ ನಡೆಸಲಾದ ಗೌರಿ ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಾಡಿಗಳಲ್ಲಿ ಪ್ರತಿಭಾವಂತ ಮಕ್ಕಳು ಇದ್ದು ಅವರಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ರಾಜ್ಯಮಟ್ಟಕ್ಕೆ ಹಾಗೂ ರಾಷ್ಟ್ರಮಟ್ಟಕ್ಕೆ ಎಲ್ಲ ಕ್ಷೇತ್ರದಲ್ಲಿ ಮುಂದೆ ತರಲು ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು. ಹಾಡಿಯ ಮಕ್ಕಳಲ್ಲಿ ಪ್ರತಿಭಾ ಸಾಮಥ್ರ್ಯಗಳಿದ್ದು, ಜಿಲ್ಲೆಗೆ ಹಾಗೂ ರಾಜ್ಯ ರಾಷ್ಟ್ರಕ್ಕೆ ಕೀರ್ತಿ ತರುವಂತಹ ಆಗಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜೆ.ಕೆ.ರಾಮು, ಶ್ರೀ ವರಸಿದ್ಧಿ ವಿನಾಯಕ ಉತ್ಸವ ಸಮಿತಿ ಪದಾಧಿಕಾರಿಗಳಾದ ಜೆ.ಬಿ.ರಾಜ, ಅಶೋಕ, ಎಂ.ಡಿ.ರಾಜ, ಜೆ.ಬಿ.ರಾಜು, ಪಾಪಣ್ಣ ಇನ್ನಿತರರು ಹಾಜರಿದ್ದರು. ಹಾಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ವ್ಯಾಪ್ತಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಕಾಡಿನ ಮಕ್ಕಳು ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.









