
ಮಡಿಕೇರಿ ಸೆ.15 NEWS DESK : ಪ್ರಜಾಪ್ರಭುತ್ವ ಇತಿಹಾಸವನ್ನು ಹೊಂದಿದಂತಹ ಭಾರತದಲ್ಲಿ ಜನಿಸಲು ನಾವೇ ಪುಣ್ಯವಂತರು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶ ಅಭಿವೃದ್ಧಿಯಾಗುತ್ತದೆ, ಜನಸಂಖ್ಯೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ದೇಶವು ಸುಸ್ಥಿರವಾಗಿದೆ. ಜಾತಿ ಧರ್ಮ ಭೇದಭಾವ ಇಲ್ಲದೆ ಹೀಗೆ ಸಾಗಬೇಕೆಂದರೆ ನಮ್ಮ ಮತ-ನಮ್ಮ ಹಕ್ಕು ಎನ್ನುವ ಘೋಷ ವಾಕ್ಯವನ್ನು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸುವ ಮುಖಾಂತರ ಪಾಲಿಸಬೇಕು ಎಂದರು. ಪ್ರಜಾಪ್ರಭುತ್ವ ಆಡಳಿತದ ಮೇಲೆ ಯುವ ಪೀಳಿಗೆ ಒಲವು ಮೂಡಿಸುವ ಕಾರ್ಯಕ್ರಮ ಹೆಚ್ಚಿಸಬೇಕು. ರಾಜಕೀಯದ ಆಡಳಿತ ಕುರಿತು ಶಿಕ್ಷಣವನ್ನು ನೀಡಬೇಕು. ಯುವ ಪೀಳಿಗೆಯನ್ನು ಸೇರಿಸಿಕೊಂಡು ರಾಜಕೀಯ ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು. ಆಗಲೇ ರಾಜ್ಯವು ಸುಸ್ಥಿರವಾಗಿರುವುದು ಎಂದು ನುಡಿದರು. ಅಕ್ಕ-ಪಕ್ಕದ ರಾಷ್ಟ್ರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ಗಮನಿಸಿ, ಅದನ್ನರಿತುಕೊಂಡು ಮುಂದಾಗುವ ಕೆಡುಕನ್ನು ತಪ್ಪಿಸಲು ಪ್ರಜೆಗಳೆಲ್ಲರೂ ಒಟ್ಟುಗೂಡಿ ದೇಶಕ್ಕೆ ಒಳಿತನ್ನು ಮಾಡಬೇಕು ಎಂದು ತಿಳಿಸಿದರು. ಸಂವಿಧಾನವನ್ನು ಪ್ರತಿಯೊಬ್ಬರ ಜೀವನದಲ್ಲಿಯೂ ಅನ್ವಯ ಮಾಡಿಕೊಳ್ಳುವಂತಾಗಬೇಕು. ಹಾಗೆಯೇ ಪಾಲಿಸಿ ಗೌರವಿಸಬೇಕು. ಪ್ರತಿಯೊಬ್ಬರೂ ನಾಯಕರೇ, ನಾಯಕನಾಗಿ ನಾಯಕನಂತೆ ಮಾತನಾಡಬೇಕು. ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ತಮ್ಮ-ತಮ್ಮ ಹಕ್ಕುಗಳನ್ನು ದೊರಕಿಸಿಕೊಳ್ಳಬೇಕು ಎಂದು ನುಡಿದರು. ರಾಜಕೀಯಕ್ಕೆ ಯುವಶಕ್ತಿ ಪ್ರೇರಣೆಯಾಗಿದೆ ಎಂದರು. ಯುವಜನರು ಹೆಚ್ಚಿನ ಆಸಕ್ತಿ ಕೊಟ್ಟು ಶಿಕ್ಷಣ ಪಡೆದು ಆಡಳಿತ ಕ್ಷೇತ್ರದ ಹುದ್ದೆಯನ್ನು ಪಡೆಯಬೇಕು ಎಂದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತ ರಾಷ್ಟ್ರಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು. “ರಾಜಕೀಯ ವ್ಯವಸ್ಥೆಯಲ್ಲಿ ಸಾರ್ವಜನಿಕರೇ ಆಸ್ತಿ” ಎಂದು ನೆಲ್ಸನ್ ಮಂಡೇಲಾ ಹೇಳಿದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರಜಾಪ್ರಭುತ್ವವನ್ನು ನಾಯಕರುಗಳು ಮಾತ್ರವಲ್ಲ ಸಾರ್ವಜನಿಕರು ಕಾಪಾಡಬೇಕು ಎಂದು ತಿಳಿಸಿದರು. ಅಂಬೇಡ್ಕರ್ ಸಂಘಟನೆ ವತಿಯಿಂದ ಬಂದ ಬೇಡಿಕೆಯನ್ನು ಸ್ವೀಕರಿಸಿ ಅತ್ಯಂತ ಶೀಘ್ರದಲ್ಲಿ ಪೂರೈಸುತ್ತೇವೆ ಎಂದು ಸಂಘಟನೆಯ ಕಾರ್ಯದರ್ಶಿಗಳು ಹಾಗೂ ಮುಖಂಡರಿಗೆ ಆಶ್ವಾಸನೆ ನೀಡಲಾಯಿತು. ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡುವುದಾಗಿ ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದರು. ನಗರದ ಗುಡ್ಡೆಮನೆ ಅಪ್ಪಯ್ಯ ಗೌಡ ಸ್ಮಾರಕ ಬಳಿ ಅಂಬೇಡ್ಕರ್ ಸ್ಮಾರಕ ನಿರ್ಮಿಸಲು ಗಣ್ಯರಿಂದ ಸ್ಥಳ ವೀಕ್ಷಿಸಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಫ್‍ಎಂಕೆಎಂಸಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಧರ್ ಅವರು ಮಾತನಾಡಿ ರಾಷ್ಟ್ರಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ನಮ್ಮ ಭಾರತ ಸಂವಿಧಾನ ತಲುಪಿದ್ದು, ಇಂತಹ ಮಹತ್ವಪೂರ್ಣ ಘಟನೆಯು ಭಾರತವನ್ನು ವಿಶ್ವದಾದ್ಯಂತ ಗುರುತಿಸಲು ಸಾಧ್ಯವಾಗಿದ್ದು ಸಂತೋಷಕರ ಸಂಗತಿಯಾಗಿದೆ ಎಂದರು. ಜನರ ಆಡಳಿತ ಮೂಲ ಶಕ್ತಿ ಜನರೇ ಆಗಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯ ಇದಕ್ಕೆ ಮೂಲ ಕಾರಣವೇ ನಮ್ಮ ಭಾರತದ ಸಂವಿಧಾನ ಎಂದರು. ಜಾತಿ ಧರ್ಮ ಮತದ ಯಾವುದನ್ನು ಲೆಕ್ಕಿಸದೆ ಸಾರ್ವತ್ರಿಕ ಚುನಾವಣೆಯ ಮೂಲಕ ನಡೆಯುತ್ತಿರುವ ಭಾರತದ ಆಡಳಿತ ವ್ಯವಸ್ಥೆ ಅತ್ಯಂತ ಪ್ರಬಲವಾಗಿದೆ. ಭಯ ಇಲ್ಲದ ವಾತಾವರಣ ಸ್ಥಾಪಿಸಬೇಕಾದರೆ ದೇಶದ ಒಳಗೆ ಪ್ರಜಾಪ್ರಭುತ್ವ ಶಕ್ತಿಶಾಲಿಯಾಗಿ ಪರಿಣಾಮ ಬೀರಬೇಕು ಎಂದು ನುಡಿದರು. ಡಿ.ಎಸ್.ಎಸ್ ಸಂಚಾಲಕರಾದ ದಿವಾಕರ್ ಅವರು ಮಾತನಾಡಿ ಅಂಬೇಡ್ಕರ್ ಭವನ ಸ್ಥಾಪನೆಗೆ ಸ್ಥಳ ಅವಕಾಶವನ್ನು ನೀಡಬೇಕೆಂದು ಮೊದಲು ಗುರುತಿಸಲಾದ ಸ್ಥಳವು ಸಮಿತಿಗೆ ಅಸಮಾಧಾನಕರವಾಗಿದ್ದು ಬೇರೆ ಸ್ಥಳವನ್ನು ನಿಗದಿಪಡಿಸಬೇಕೆಂದು ಗಣ್ಯರಲ್ಲಿ ಮನವಿ ಮಾಡಿದರು. ಈ.ರಾಜು ಮತ್ತು ತಂಡದವರು ಸಂವಿಧಾನ ಕುರಿತು ಹಾಡು ಹಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮದ ಉತ್ತಪ್ಪ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಂದ್ರಿರ ಮೋಹನ್ ದಾಸ್, ನಗರಸಭೆ ಸದಸ್ಯರಾದ ಸತೀಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್‍ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶೇಖರ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ವೀರಭದ್ರಯ್ಯ, ದೀಪಕ್, ರಾಜು, ಜನಾರ್ಧನ, ಜಗದೀಶ್, ಮಡಿಕೇರಿ ತಾಲೂಕು ತಹಶೀಲ್ದಾರ್ ಶ್ರೀಧರ್, ಡಿಎಸ್‍ಎಸ್ ಸಂಚಾಲಕರಾದ ದಿವಾಕರ್, ಮೋಹನ್ ಮೌರ್ಯ, ದೀಪಕ್ ಪೊನ್ನಪ್ಪ, ಗಣೇಶ್, ಗೋಪಾಲ್ ಮತ್ತಿತರರು ಇದ್ದರು. ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶೇಖರ್ ಅವರು ಸ್ವಾಗತಿಸಿ, ವಂದಿಸಿದರು.









