
ಸೋಮವಾರಪೇಟೆ, ಸೆ.19 NEWS DESK : ಕೊಡಗು ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ ಸೋಮವಾರಪೇಟೆಯ ಸೇಂಟ್ ಜೋಸೆಫ್ ಪದವಿ ಕಾಲೇಜಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬೆಳಿಗ್ಗೆ ಆರಂಭವಾದ ಟ್ರಯಲ್ಸ್‌ನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಅಂತರರಾಷ್ಟ್ರೀಯ ಹ್ಯಾಂಡ್‌ಬಾಲ್ ಆಟಗಾರ ಗ್ರೀನಿಡ್ಜ್ ಡಿ.ಕುನ್ಹಾ ಟ್ರಯಲ್ಸ್ ಉದ್ಘಾಟಿಸಿ, ಆಟಗಾರರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೆವರೆಂಡ್ ಫಾದರ್ ಅವಿನಾಶ್ ಹಾಜರಿದ್ದರು. ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆಗೆ, ಗ್ರೀನಿಡ್ಜ್ ಡಿ . ಕುನ್ಹಾ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್, ಸೋಮವಾರಪೇಟೆಯ BTCG ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗುರು ಪ್ರಸಾದ್, ಹಾಗೂ ಆತಿಥೇಯ ಸೇಂಟ್ ಜೋಸೆಫ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಿವಕುಮಾರ್ ಕೆ.ಆರ್ ಅವರನ್ನೊಳಗೊಂಡ ಸಮಿತಿಯು ನೇತೃತ್ವ ವಹಿಸಿತು. ಸುಮಾರು 50 ವಿದ್ಯಾರ್ಥಿಗಳು ಕಬಡ್ಡಿ ಕ್ರೀಡೆಯಲ್ಲಿ ತಮ್ಮ ತಾಂತ್ರಿಕ ಕೌಶಲ್ಯ, ಶಕ್ತಿ ಮತ್ತು ತಂತ್ರಗಳನ್ನು ಪ್ರದರ್ಶಿಸಿದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕೊಡಗಿನಿಂದ ಕಬಡ್ಡಿ ಪ್ರತಿಭೆಗಳು ಮೆರೆದರೆ, ಮುಂಬರುವ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಹಿರಿಮೆ ಮತ್ತಷ್ಟು ಬೆಳೆದೀತು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ವರದಿ : ಅಶೋಕ್ ಮಡಿಕೇರಿ









