
ವಿರಾಜಪೇಟೆ ಸೆ.20 NEWS DESK : ಸರಕಾರದ ಪಂಚ ಯೋಜನೆಯನ್ನು ಸರ್ವರಿಗೂ ಕೊಡಿಸುವ ಉದ್ದೇಶದ ಅಂಗವಾಗಿ ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು. ವಿರಾಜಪೇಟೆ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ.ಜಾನ್ಸನ್, ವಿರಾಜಪೇಟೆಯ ಕೆಲವು ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರದ ವತಿಯಿಂದ ಉಚಿತವಾಗಿ ನೀಡುವ ಅಕ್ಕಿಗೆ ಹಣ ಪಡೆಯುತ್ತಿರುವ ಅಂಗಡಿಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಹಾರ ನಿರೀಕ್ಷರು ತಕ್ಷಣ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ಕಾಕೋಟುಪರಂಬವಿನ ನ್ಯಾಯಬೆಲೆ ಅಂಗಡಿಯಲ್ಲಿ ಒಂದು ಕೆಜಿ ಅಕ್ಕಿಗೆ ಎರಡು ರೂಪಾಯಿ ಹೆಚ್ಚಿಗೆ ಪಡೆಯುತ್ತಿರುವ ಅಂಗಡಿ ಮೇಲೆ ಕ್ರಮವನ್ನು ಕೈಗೊಳ್ಳಬೇಕು. ಇದೇ ರೀತಿ ಬಡವರಿಂದ ಉಚಿತವಾಗಿ ನೀಡುವ ಅಕ್ಕಿಗೆ ಹಣ ಪಡೆಯುವುದು ಮುಂದುವರಿದರೆ ಅಂತಹ ನ್ಯಾಯಬೆಲೆ ಅಂಗಡಿಯನ್ನು ಮುಚ್ಚಿಸಿ ಉತ್ತಮ ರೀತಿಯಲ್ಲಿ ನಡೆಸಲು ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅದ್ಯಕ್ಷ ಜಾನ್ಸನ್ ಮಾಹಿತಿ ನೀಡಿದರು. ಸರಕಾರವು ಉಚಿತವಾಗಿ ಮಹಿಳೆಯರಿಗೆ ಸಂಚರಿಸಲು ಬಸ್ಸು ವ್ಯವಸ್ಥೆ ಮಾಡಿದೆ. ಆದರೆ ವಿರಾಜಪೇಟೆಯಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುತ್ತದೆ. ಆ ಸಮಯದಲ್ಲಿ ಬಸ್‍ಗಳು ನಿಲ್ದಾಣಕ್ಕೆ ಬರುವುದಿಲ್ಲ ಕಾರಣವೇನು. ಅಲ್ಲದೆ ಕರೋನ ಸಂದರ್ಭದಲ್ಲಿ ನಿಂತು ಹೋಗಿದ್ದ ಸುಮಾರು ಆರು ಬಸ್‍ಗಳ ಜೊತೆಯಲ್ಲಿ ಮತ್ತೆ ಮೂರು ಬಸ್ ಸಂಚಾರದ ವ್ಯವಸ್ಥೆಯನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಅನುಕೂಲ ಮಾಡಿ ಕೊಟ್ಟಿದ್ದರು. ಅದರಲ್ಲಿ ಮೂರು ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಕೇಳಿದಾಗ ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಬಸ್‍ಗಳು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂದು ತಿಳಿಸಿದರು. ಅನೇಕ ಶತಮಾನದಿಂದ ಸಂಚರಿಸುತ್ತಿದ್ದ ವಿರಾಜಪೇಟೆ ಸರಕಾರಿ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ರಾತ್ರಿ ಎಂಟು ಗಂಟೆಯ ಬಸ್ ಮತ್ತು ಹತ್ತು ಮೂವತ್ತರ ಬಸ್‍ಗಳನ್ನು ಮರಳಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ತಿಳಿಸಿದರು. ಗೃಹಲಕ್ಮಿ ಯೋಜನೆ ಜೂನ್‍ವರೆಗೂ ಶೇ. ಎಂಬತ್ತು ಪ್ರತಿಶತ ನೀಡಲಾಗಿದೆ. ಕೆಲವರ ದಾಖಲೆಯಲ್ಲಿ ಕೆಲವು ಸಮಸ್ಯೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸವಲತ್ತುಗಳನ್ನು ನೀಡಲು ಸಾದ್ಯವಾಗಿಲ್ಲ ಎಂದು ಜಾನ್ಸನ್ ತಿಳಿಸಿದರು. :: ಚೆಸ್ಕಾ ಇಲಾಖೆಗೆ ಅಭಿನಂದನಾ ಪತ್ರ ವಿತರಣೆ :: ಕೆಲವು ತಿಂಗಳ ಹಿಂದೆ ಸುರಿದ ಬಾರಿ ಮಳೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಡಕುಗಳನ್ನು ನೀಡದ ಉತ್ತಮ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಿದ ಚೆಸ್ಕಾ ಇಲಾಖೆಗೆ ವಿರಾಜಪೇಟೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭ ಚೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಸುರೇಶ್ ಅವರು ದಿಡ್ಡಳ್ಳಿ ಮತ್ತು ತಟ್ಟಳ್ಳಿ ಹಾಡಿಯ ಅನೇಕ ಮನೆಗೆ ವಿದ್ಯುತ್ ಪೂರೈಕೆಯ ಬಿಲ್‍ಗಳು ಬರುತ್ತಿದೆ. ಅಲ್ಲಿ ಕೆಲವು ಸದಸ್ಯರು ತಮ್ಮ ಆಧಾರ್ ಕಾರ್ಡ್ ನೀಡಿ ಉಚಿತ ವಿದ್ಯುತ್ ಯೋಜನೆ ಪಡೆಯಲು ನಾವೇ ಹಾಡಿಗೆ ಹೋಗಿ ನೋಂದಣಿ ಮಾಡಲು ಉದ್ದೇಶಿದ್ದೇವೆ. ದಿನಾಂಕ ನಿಗದಿ ಮಾಡಲು ಅವಕಾಶ ಮಾಡಿಕೊಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಅಪ್ಪಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಕಾವೇರಮ್ಮ, ನಡಿಕೇರಿಯಂಡ ಮಹೇಶ್, ಆಹಾರ ಇಲಾಖೆಯ ಅಧಿಕಾರಿ ಸೀನಾ ಕುಮಾರಿ ಸೇರಿದಂತೆ ಯೋಜನೆಯ ಸದಸ್ಯರುಗಳು, ಇಲಾಖೆಯ ಅಧಿಕಾರಿಗಳು ಹಾಜರಿದ್ದು ಸಲಹೆ ಸೂಚನೆ ನೀಡಿ ಚರ್ಚಿಸಿದರು.









