
ಮಡಿಕೇರಿ NEWS DESK ಸೆ.23 : ಕೊಡಗು ಜಿಲ್ಲೆಯ ಅರೆಭಾಷೆ ಗೌಡರು ಜಾತಿ ಜನಗಣತಿ ಸಂದರ್ಭ ಗೌಡ ಎಂದು ನಮೂದಿಸುವಂತೆ ಮಡಿಕೇರಿ GOWDA (ಗೌಡ) ಸಮಾಜ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಅವರು ಪ್ರಸ್ತುತ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯಲ್ಲಿ ಹಾಗೂ ಮುಂದೆ ನಡೆಯಲಿರುವ ಕೇಂದ್ರ ಸರ್ಕಾರದ ಜಾತಿ ಗಣತಿಯ ಸಂದರ್ಭ ಜಾತಿಯ ಕಾಲಂನಲ್ಲಿ GOWDA (ಗೌಡ), ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃ ಭಾಷೆ ಅರೆಭಾಷೆ ಎಂದು ನಮೂದಿಸಲು ಮನವಿ ಮಾಡಿದ್ದಾರೆ. ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿರುವುದು ನಿಜ. ಆದರೆ ಅರೆಭಾಷೆ ಗೌಡರ ಶೈಕ್ಷಣಿಕ ಮತ್ತು ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ಗೌಡ ಎಂದೇ ನಮೂದಾಗಿರುವುದರಿಂದ ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಅರೆಭಾಷೆ ಗೌಡ ಸಮುದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಚರ್ಚಿಸಿ, ಕೊಡಗು ಗೌಡ ಸಮಾಜಗಳ ಒಕ್ಕೂಟವು ಗಣತಿ ಸಂದರ್ಭ ಗೌಡ ಎಂದು ನಮೂದಿಸಲು ನಿರ್ಣಯ ಕೈಗೊಂಡಿದೆ. ಇದಕ್ಕೆ ಮಡಿಕೇರಿ ಗೌಡ ಸಮಾಜ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಕೂಡ ಇದ್ದು, ಅಲ್ಲಿ ಒಕ್ಕಲಿಗ ಅಥವಾ ಕೊಡಗು ಗೌಡ ಅಥವಾ ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಅವಕಾಶವಿದೆ. ಎಲ್ಲಾ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದಲ್ಲಿ ಅವರುಗಳು ಜಾತಿ ಒಕ್ಕಲಿಗ, ಉಪಜಾತಿ ಅರೆಭಾಷೆ ಗೌಡ, ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಪಜಾತಿಯಲ್ಲಿ ಅರೆಭಾಷೆ ಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸಿದೆ. ಆದ್ದರಿಂದ ಉಪಜಾತಿ ಎನ್ನುವ ಕಾಲಂನಲ್ಲಿ ಅರೆಭಾಷೆ ಗೌಡ ಎಂದು ನಮೂದಿಸಬೇಕು. ಈ ಎಲ್ಲಾ ಮಾಹಿತಿಗಳನ್ನು ಅರೆಭಾಷೆ ಗೌಡರು ಗಮನದಲ್ಲಿರಿಸಿಕೊಂಡು ಕಡ್ಡಾಯವಾಗಿ ರಾಜ್ಯ ಮತ್ತು ಕೇಂದ್ರದ ಎರಡೂ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂದು ಪೇರಿಯನ ಜಯಾನಂದ ಕೋರಿದ್ದಾರೆ.








