
ಮೈಸೂರು, ಸೆ.30 NEWS DESK : ಕನ್ನಡ ಸಾಹಿತ್ಯ ಲೋಕ ಮಾತ್ರವಲ್ಲ, ಸಾರಸ್ವತ ಲೋಕದಲ್ಲಿ ಕಳಶಪ್ರಾಯರಾಗಿದ್ದ, ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರು ಇಹಲೋಹ ತ್ಯಜಿಸಿ, ಅವರ ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಆದರೆ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದರು ಪತ್ರ ಬರೆದು ಮನವಿ ಮಾಡಿದ್ದಾರೆ. ಸತ್ಯ ಶೋಧನೆ, ನಿರಂತರ ಅಧ್ಯಯನಗಳನ್ನು ನಡೆಸಿ ಕೃತಿಗಳನ್ನು ರಚಿಸಿ ಶ್ರೇಷ್ಠ ಲೇಖಕರಲ್ಲಿ ಒಬ್ಬರಾಗಿರುವ ಡಾ.ಎಸ್.ಎಲ್. ಭೈರಪ್ಪನವರು ಸಾರಸ್ವತ ಲೋಕದ ಜೊತೆಗೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನೊಂದಿಗೆ ವಿಶೇಷ ನಂಟು ಹೊಂದಿರುವುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿ, ಮೈಸೂರು ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ಅಧ್ಯಾಪಕರಾಗಿ ವಿಶೇಷ ಸ್ಥಾನ ಹೊಂದಿದ್ದಾರೆ. ಸರಸ್ವತಿ ಪುತ್ರರಾಗಿ, ಸಾಹಿತ್ಯ ದಿಗ್ಗಜರಾಗಿ ಮಾತ್ರವಲ್ಲ ಗೌರವಾನ್ವಿತ ನಾಗರಿಕರಾಗಿ ಎಸ್.ಎಲ್. ಭೈರಪ್ಪ ಮೈಸೂರಿಗರಿಗರ ಮನೆ-ಮನಗಳಲ್ಲಿ ಚಿರಸ್ಥಾಯಿ ಉಳಿದಿದ್ದಾರೆ ಎಂದು ಸಂಸದರುಯ ಸ್ಪಷ್ಟಪಡಿಸಿದ್ದಾರೆ. ಡಾ.ಎಸ್.ಎಲ್. ಭೈರಪ್ಪನವರ ಹೆಸರನ್ನು ಇನ್ನಷ್ಟು ಚಿರಸ್ಥಾಯಿ ಉಳಿಯುವಂತೆ ಮಾಡಲು ಮೈಸೂರಿನಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ.ಎಸ್.ಎಲ್. ಭೈರಪ್ಪ ಹೆಸರನ್ನು ಮರು ನಾಮಕರಣ ಮಾಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಗ್ರಂಥಾಲಯದ ಆವರಣದಲ್ಲಿ ಭೈರಪ್ಪನವರ ಜೀವನ ಚರಿತ್ರೆ, ಸಾಹಿತ್ಯ ಕೃತಿಗಳನ್ನು ಪ್ರತಿಬಿಂಬಿಸುವ ಶಾಶ್ವತ ಸ್ಮಾರಕವನ್ನು ನಿರ್ಮಿಸಬೇಕು ಎಂದು ವಿನಂತಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಪತ್ರದಲ್ಲಿ ತಿಳಿಸಿದ್ದಾರೆ.








