
ವಿರಾಜಪೇಟೆ ಅ.8 NEWS DESK : “ವಿಶ್ವದ ಅಗ್ರ 2% ವಿಜ್ಞಾನಿಗಳು” (2025ರ ಸಮೀಕ್ಷೆ) ಪಟ್ಟಿಯಲ್ಲಿ ಡಾ.ಉತ್ತಪ್ಪ ಯು.ಟಿ. ಅವರು ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಪ್ರತಿ ವರ್ಷ ಅಮೆರಿಕಾದ ಸ್ಟ್ಯಾಂಫರ್ಡ್ ವಿಶ್ವವಿದ್ಯಾಲಯದ ಪ್ರೊ. ಪಿ.ಎ.ಜಾನ್ ಇಯೋನಿಡಿಸ್ ಅವರು, ಎಲ್ಸೆವಿಯರ್ (Elsevier) ಮತ್ತು ಸ್ಕೋಪಸ್ Scopus ಸಂಸ್ಥೆಗಳ ಸಹಯೋಗದೊಂದಿಗೆ “ವಿಶ್ವದ ಅಗ್ರ 2% ವಿಜ್ಞಾನಿಗಳು” ಎಂಬ ಪಟ್ಟಿಯನ್ನು ಪ್ರಕಟಿಸುತ್ತಾರೆ. ಈ ಪಟ್ಟಿ ವಿಶ್ವದಾದ್ಯಂತದ ಸುಮಾರು 2% ವಿಜ್ಞಾನಿಗಳಲ್ಲಿ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳನ್ನು ಗುರುತಿಸುವುದು. ಈ ಸಮೀಕ್ಷೆ ಮಾನದಂಡಿತ ಉಲ್ಲೇಖ (citation) ಅಂಶಗಳು ಮತ್ತು ಸಂಯುಕ್ತ ವೈಜ್ಞಾನಿಕ ಪರಿಣಾಮದ ಸೂಚ್ಯಂಕಗಳ ಆಧಾರದ ಮೇಲೆ ಮಾಡಲ್ಪಟ್ಟಿದೆ. ಡಾ. ಉತಪ್ಪ ಯು.ಟಿ. ಅವರು ಪ್ರಸ್ತುತ ಚೀನಾದ ಶೆನ್ಜೆನ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಮತ್ತು ಪರಿಸರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೋಸ್ಟ್-ಡಾಕ್ಟರಲ್ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮೊದಲು ಅವರು ದಕ್ಷಿಣ ಕೊರಿಯಾದ ಚೋನ್ನಮ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ (2021-2022) ಪೋಸ್ಟ್-ಡಾಕ್ಟರಲ್ ಫೆಲೋ ಆಗಿ ಹಾಗೂ ಯಾಂಗ್ನಮ್ ಯುನಿವರ್ಸಿಟಿಯಲ್ಲಿ (2022-2023) ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಉತ್ತಪ್ಪ ಅವರು ಭಾರತದ ಬೆಂಗಳೂರು ನಗರದಲ್ಲಿರುವ ಜೈನ್ ವಿಶ್ವವಿದ್ಯಾಲಯದಿಂದ (2021) ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರ ಮುಖ್ಯ ಸಂಶೋಧನಾ ಕ್ಷೇತ್ರವೆಂದರೆ ಪರಿಸರ, ಆರೋಗ್ಯ, ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸ್ಥಿರತೆಯನ್ನು ಸಾಧಿಸುವ ದಿಟ್ಟ ಗುರಿಯೊಂದಿಗೆ ಜಾಗತಿಕ ಸವಾಲುಗಳನ್ನು ಪರಿಹರಿಸುವುದಾಗಿದೆ. ಉತ್ತಪ್ಪ ಅವರು ಅಂತಾರಾಷ್ಟ್ರೀಯ ಖ್ಯಾತಿಯ ವಿಮರ್ಶಿತ ವಿಜ್ಞಾನ ಪತ್ರಿಕೆಗಳಲ್ಲಿ 50 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 2300 ಕ್ಕೂ ಹೆಚ್ಚು ಉಲ್ಲೇಖಗಳು (citations) ಪಡೆದಿದ್ದಾರೆ ಹಾಗೂ ಹೆಚ್. ಇಂಡೆಕ್ಸ್: 25 ಹೊಂದಿದ್ದಾರೆ. ಇದರ ಜೊತೆಗೆ 2 ಕೊರಿಯನ್ ಮತ್ತು 1 ಚೀನೀ ಪೇಟೆಂಟ್‍ಗಳನ್ನು ದಾಖಲಿಸಿದ್ದಾರೆ. ಅಪೂರ್ವ ಸಾಧಕ ಡಾ.ಉತ್ತಪ್ಪ ಅವರು ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಉಳುವಂಗಡ ಸಾಬು ತಮ್ಮಯ್ಯ ಹಾಗೂ ಉಳುವಂಗಡ ಮೀನಾ ಅವರ ಪುತ್ರ. ಪ್ರಸ್ತುತ ಇವರು ಚೀನಾ ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.









