
ಮಡಿಕೇರಿ ನ.14 NEWS DESK : ಕ್ರೀಡೆಯನ್ನು ಅದರ ನೈಜ ರೀತಿಯಲ್ಲಿ ಆಸ್ವಾದಿಸುತ್ತಾ ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ ಕರೆ ನೀಡಿದರು. ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನಾಲ್ಕನೇ ವರ್ಷದ ಐಪಿಎಲ್ ಮಾದರಿಯ ಕೊಡವ ಪ್ರೀಮಿಯರ್ ಲೀಗ್ ಸೀಸನ್-4 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಕ್ರೀಡಾ ಪಟುಗಳಿಗೆ ಶುಭಹಾರೈಸಿ ಮಾತನಾಡಿದರು. ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಕ್ರಿಕೆಟ್ ಪಂದ್ಯಾಟವು, ಇಂದು ದೇಶದ ಎಲ್ಲಾ ಕ್ರೀಡಾ ಪ್ರೇಮಿಗಳು ಇಷ್ಟಪಡುವ ಕ್ರೀಡೆಯಾಗಿದೆ. ನಮ್ಮ ಕೊಡಗಿನಲ್ಲಿ ಸಹ, ಇಂತಹ ಪಂದ್ಯಾವಳಿಗಳು ನಡೆಯುವುದರಿಂದ ಅನೇಕ ಕ್ರಿಕೆಟ್ ಪಟುಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ ಎಂದರು. ಕೊಡಗು ಜಿಲ್ಲೆಯಿಂದ ಹತ್ತಾರು ಶ್ರೇಷ್ಠ ಕ್ರಿಕೆಟ್ ಆಟಗಾರರು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಕೊಡಗಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರವು ಜಿಲ್ಲೆಗೆ ಕೋಟ್ಯಾಂತರ ಅನುದಾನ ನೀಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಇನ್ನು ಸದ್ಯದಲ್ಲೇ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ತರಬೇತಿ ಕೇಂದ್ರಗಳು ಮೈದಾನಗಳು ಹಾಗೂ ಕ್ರೀಡಾ ವಸತಿ ನಿಲಯಗಳು ಪೊನ್ನಂಪೇಟೆ ವಿರಾಜಪೇಟೆ ಹಾಗೂ ಜಿಲ್ಲೆಯ ಇತರ ಭಾಗಗಳಲ್ಲೂ ಕ್ರೀಡಾಳುಗಳ ಅನುಕೂಲಕ್ಕೆ ಲಭ್ಯವಾಗಲಿದೆ ಎಂದು ಹೇಳಿದರು. ಈ ಸಂದರ್ಭ ಉದ್ಯಮಿ ರಾಜ ವಿಜಯ ಕುಮಾರ್, ಸಿಗ್ಮ ನೆಟ್‌ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅವರೆಮಾದಂಡ ಶರಣ್ ಪೂಣಚ್ಚ, ಕೊಡವ ನಟಿ ಕಾಣತಂಡ ಬೀನ ಜಗದೀಶ್, ಕಾಫಿ ಬೆಳೆಗಾರ ಅಪ್ಪನೆರವಂಡ ನಂದಾ ಬೆಳ್ಯಪ್ಪ, ಅಸೋಸಿಯೇಷನ್ ನ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ, ಉಪಾಧ್ಯಕ್ಷ ಚಕ್ಕೇರ ಕಾರ್ಯಪ್ಪ, ಕಾರ್ಯದರ್ಶಿ ಮುಕ್ಕಾಟಿರ ದೀಪಕ್ ಹಾಗೂ ಗಣ್ಯರು, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
ಅಂಜಿಗೇರಿ ನಾಡ್, ಡೀ ಕೋಚ್, ಟೀಮ್ ಕೊಡವ ಟ್ರೈಬ್, ಕೊಡವ ನೈಟ್ಸ್, ಕೊಡವ ವಾರಿಯರ್ಸ್, ಕೊಡವಮ್ಮೆ ಕಲ್ಟ್ಸ್, ಎಜೆ ಬಾಯ್ಸ್, ಟೀಮ್ ಮಹಾಗುರು, ಟೀಮ್ ಭಗವತಿ, ಮರ್‍ನಾಡ್ ಯುನೈಟೈಡ್, ಎಂಟಿಬಿ ರಾಯಲ್ಸ್ ಮತ್ತು ಕೊಡವ ಬೊಮ್ಮಂಗ ತಂಡಗಳು ಟ್ರೋಫಿಗಾಗಿ ಸೆಣಸಾಡಲಿದೆ. ನ.16 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಪ್ರಥಮ ವಿಜೇತ ತಂಡಕ್ಕೆ ರೂ.2 ಲಕ್ಷ, ದ್ವಿತೀಯ ರೂ.1 ಲಕ್ಷ, ತೃತೀಯ ರೂ.50 ಸಾವಿರ, ನಾಲ್ಕನೇ ವಿಜೇತ ತಂಡಕ್ಕೆ 25 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಸೇರಿದಂತೆ ವೈಯುಕ್ತಿಕ ಬಹುಮಾನ ನೀಡಲಾಗುವುದು.








