
ಮಡಿಕೇರಿ ನ.28 NEWS DESK : ನೂರಾರು ವರ್ಷಗಳ ಕಾಲ ಪ್ರಾಣಿ ಪಕ್ಷಗಳ ಆವಾಸ ಸ್ಥಾನವಾಗಿ, ಬಿಸಿಲ ಬೇಗೆಗೆ ತಂಪಾದ ನೆರಳು ನೀಡಿ ಕಳೆದ ಮುಂಗಾರಿನ ಅವಧಿಯಲ್ಲಿ ಧರೆಗುರುಳಿ ಇತಿಹಾಸ ಸೇರಿದ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಕೊಡವ ಸಮಾಜದ ‘ಮಂದ್’ನ ಅತ್ತಿಮರವಿದ್ದ ಜಾಗದಲ್ಲಿ ‘ಅರಳಿ ಗಿಡ’ವನ್ನು ನೆಟ್ಟು, ಅದನ್ನು ಸಂರಕ್ಷಿಸುವ ನಿರ್ಧಾರ ತಳೆಯಲಾಯಿತು. ಮಡಿಕೇರಿ ಕೊಡವ ಸಮಾಜದ ಮಂದ್‍ನಲ್ಲಿ ಅರಳಿ ಗಿಡವನ್ನು ನೆಡಲು ಕೈಜೋಡಿಸಿದ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಂದ್‍ನ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆಯೆಂದರು. ಸುಮಾರು ಎರಡೂವರೆ ಶತಮಾನಗಳ ಇತಿಹಾಸ ಹೊಂದಿರುವ ಮಂದ್‍ನಲ್ಲಿದ್ದ ಬೃಹತ್ ಅತ್ತಿ ಮರ ಮರಿದು ಬಿದ್ದ ಹಿನ್ನೆಲೆಯಲ್ಲಿ ನೂತನ ಕಟ್ಟೆ ನಿರ್ಮಿಸಿ ಅರಳಿ ಗಿಡವನ್ನು ನೆಡಲಾಗಿದೆಯೆಂದು ತಿಳಿಸಿದರು. ಮಡಿಕೇರಿ ಕ್ಷೇತ್ರರ ಶಾಸಕ ಮಂತರ್ ಗೌಡ ಮಾತನಾಡಿ, ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಆಚರಣೆಯಂತೆ ಊರಿಗೆ ಒಂದು ಅರಳಿ ಮರ ಇರುತ್ತಿತ್ತು. ಅದರಂತೆ ಮಡಿಕೇರಿಯಲ್ಲಿರುವ ಮಂದ್‍ನಲ್ಲಿ ಕೊಡವ ಸಂಪ್ರದಾಯದಂತೆ ಅರಳಿ ಗಿಡವನ್ನು ನೆಟ್ಟಿರುವುದು ಹೆಮ್ಮೆಯ ವಿಷಯ. ಮಂದ್‍ನ ಅಭಿವೃದ್ಧಿಗೆ ವೈಯಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಮೈಸೂರು-ಕೊಡಗು ವಿಧಾನ ಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೊಡಗಿನ ಸಂಸ್ಕೃತಿ, ಐನ್ ಮನೆಗಳು, ಮಡಿಕೇರಿಯ ಕೋಟೆ, ಸಂಸ್ಕೃತಿಯ ನೆಲೆಯಾದ ಮಡಿಕೇರಿಯಲ್ಲಿ ಪುರಾತನ ಮಂದ್‍ನ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಮಾಜಿ ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಪುರಾತನ ನೆಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮಂಡೀರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವಂಡ ರವಿ ಬಸಪ್ಪ, ಕನ್ನಂಡ ಕವಿತ ಕಾವೇರಮ್ಮ, ಕಾಂಡೇರ ಲಲ್ಲು, ಪಾಲೆಯಂಡ ರೂಪ, ಪೆಮ್ಮುಡಿಯಂಡ ಉತ್ತಪ್ಪ, ಪುಲ್ಲೆರ ವಸಂತ್, ಮಡಿಕೇರಿ ಸಮಾಜದ ಸದಸ್ಯರು, ಕೊಡವ ಕೇರಿ ಪದಾಧಿಕಾರಿಗಳು ಹಾಜರಿದ್ದರು. ಉಪಾಧ್ಯಕ್ಷರಾದ ಕೇಕಡ ವಿಜು ದೇವಯ್ಯ ಕಾರ್ಯಕ್ರಮ ನಿರೂಪಿದರು. ಕಾರ್ಯಕ್ರಮಕ್ಕೂ ಮುನ್ನ ಕೊಡವ ಸಂಪ್ರದಾಯದ ಉಡುಪಿನೊಂದಿಗೆ ತಳಿಯಕ್ಕಿ ದೀಪ ಹಿಡಿದು ದುಡಿಕೊಟ್ಟು ಹಾಡಿನೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ನೂತನ ಮಂದ್‍ಗೆ ಕರೆ ತರಲಾಯಿತು.
ವರದಿ : ಪುತ್ತರಿರ ಕರುಣ್ ಕಾಳಯ್ಯ










