
ಮಡಿಕೇರಿ ಡಿ.1 NEWS DESK : ಮಡಿಕೇರಿ ಕೊಡವ ಸಮಾಜದ ವತಿಯಿಂದ ವರ್ಷಂಪ್ರತಿಯಂತೆ ಮೂರು ದಿನಗಳ ಪುತ್ತರಿ ಈಡ್ ಕಾರ್ಯಕ್ರಮಕ್ಕೆ ಪುತ್ತರಿ ಕೋಲ್ ಮಂದ್ ನಲ್ಲಿ ಚಾಲನೆ ನೀಡಲಾಯಿತು. ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿ ಜಿಲ್ಲಾ ಕ್ರೀಡಾಂಗಣದ ಸನೀಹದಲ್ಲಿರುವ ಮಂದ್ ಈ ಬಾರಿ ನವೀಕರಣಗೊಂಡಿದ್ದು, ಹೊಸದಾಗಿ ಆಲ್ ಮರ ನೆಡುವ ಕಾರ್ಯವನ್ನು ನಡೆಸಲಾಗಿತ್ತು. ಪುತ್ತರಿ ಹಬ್ಬಕ್ಕೂ ಮುನ್ನ ಕೊಡವ ಜನಪದ ಕಲೆಗಳನ್ನು ಯುವಕ ಪೀಳಿಗೆಗೂ ಕಲಿಸುವ ಮೂಲಕ ಈಡ್ ಹೆಸರಿನಲ್ಲಿ ತಾಲೀಮು ನಡೆಸುವುದು ಸಂಪ್ರದಾಯಬದ್ದವಾದ ವಾಡಿಕೆಯಾಗಿದೆ. ಆರಂಭಿಕ ದಿನದಂದು ನಗರ ವ್ಯಾಪ್ತಿಯ ಹಲವಷ್ಟು ಕೊಡವ ಬಾಂಧವರು ಪಾಲ್ಗೊಂಡಿದರು. ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ, ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ನವೀಕೃತಗೊಂಡಿರುವ ಮಂದ್ ತೆರೆಯುವ ಕಾರ್ಯಕ್ರಮದೊಂದಿಗೆ ಪುತ್ತರಿ ಈಡಿಗೆ ಚಾಲನೆ ನೀಡಿ ಮಾತನಾಡಿದರು. ಮಂದ್ ನೆಲೆಯ ಬೃಹತ್ ಮರ ಮುರಿದು ಬಿದ್ದು ಅದೇ ನೆಲೆಯಲ್ಲಿ ಅರಳಿ ಗಿಡವನ್ನು ಸಂಪ್ರದಾಯವಾಗಿ ನೆಡಲಾಯಿತು. ಹಿಂದಿನ ಸಂಪ್ರದಾಯದಂತೆ ಪುತ್ತರಿ ನಮ್ಮೆಯ ಮೂರು ದಿನ ಮುಂಚಿತವಾಗಿ ಈ ಮಂದ್‌ನಲ್ಲಿ ಪುತ್ತರಿ ಈಡನ್ನು ನಡೆಸಲಾಗುತ್ತಿದೆ ಎಂದರು. ದೇವರ ನೆಲೆಯಲ್ಲಿ ಎಲ್ಲರು ಅಕ್ಕಿಹಾಕಿ ನಮಿಸಿ ಕೋಲಾಟ್, ಬೊಳಕಾಟ್ ಪರೆಕಳಿ ನಡೆಸಲಾಯಿತು. ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಕೊಡವ ಕೇರಿ ಪದಾಧಿಕಾರಿಗಳು ಹಾಗು ಸದಸ್ಯರು ಭಾಗವಹಿಸಿದರು.









