
ಮಡಿಕೇರಿ ಡಿ.1 NEWS DESK : ಬೆಂಗಳೂರಿನಲ್ಲಿ ಬೆಂಗ್ ನಾಡ್ ಕೊಡವ ಒತ್ತೋರ್ಮೆ ಕೂಟ ಆಯೋಜಿಸಿದ ಇಂಟರ್ ನಾಡು ಹಾಕಿ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಕಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾಟದ ವೀಕ್ಷಣೆಯನ್ನು ನೆರವೇರಿಸಿ, ಪ್ರಶಸ್ತಿ ವಿತರಿಸಿ ಮಾತನಾಡಿದ ಶಾಸಕರು, ಕೊಡಗಿನ ಜನತೆಯ ಉಸಿರಿನಲ್ಲಿ ಹಾಕಿ ಪಂದ್ಯಾವಳಿ ಹಾಸುಹೊಕ್ಕಿದೆ. ಪ್ರತಿಷ್ಠಿತವಾದ ಈ ಪಂದ್ಯಾವಳಿಯ ವೀಕ್ಷಣೆಯನ್ನು ಮಾಡಿ ಈ ಪಂದ್ಯಾಟದ ರೋಚಕತೆಯನ್ನು ಆಸ್ವಾದಿಸುವ ಸೌಭಾಗ್ಯ ಒದಗಿದ್ದು, ತನಗೆ ಸಂತೋಷ ತಂದಿದೆ. ಯುವ ಪ್ರತಿಭೆಗಳನ್ನು ಲೋಕಕ್ಕೆ ಪರಿಚಯಿಸುವಂತಹ ಇಂಥ ಕ್ರೀಡಾಕೂಟಗಳು ಮತ್ತಷ್ಟು ನಡೆಯಲಿ ಎಂದು ಹಾರೈಸುತ್ತಾ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬೆಂಗ್ ನಾಡ್ ಕೊಡವ ಒತ್ತೋರ್ಮೆ ಕೂಟ್ಟದ ಅಧ್ಯಕ್ಷರಾದ ಕೇಕಡ ಎ ದೇವಯ್ಯ, ಭಾರತಿಯ ಹಾಕಿ ತಂಡದ ಮಾಜಿ ನಾಯಕ ಮೋಳೆರ ಪಿ ಗಣೇಶ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚಿರಿಯಪಂಡ ನಂಜಪ್ಪ, ಒಲಿಂಪಿಯನ್ ವಿ ಆರ್ ರಘುನಾತ್ ಹಾಗೂ ಕಾರ್ಯಕ್ರಮ ಆಯೋಜಕರು ಹಾಗೂ ಹಾಕಿ ಆಟಗಾರರು ಉಪಸ್ಥಿತರಿದ್ದರು. ಫೈನಲ್ ಪಂದ್ಯಾವಳಿಯ ರೋಚಕ ಹಣಹಣಿಯಲ್ಲಿ, ಬೆಪ್ಪುನಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ನಾಲ್ ನಾಡು ತಂಡ ದ್ವಿತೀಯ ಸ್ಥಾನ ಗಳಿಸಿತು. ಅಂಜಿಗೇರಿ ತಂಡ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿತು.









