
ಸುಂಟಿಕೊಪ್ಪ ಡಿ.1 NEWS DESK : ಆಧುನೀಕರಣದ ಭರಾಟೆಯಲ್ಲಿ ಜಾನಪದ ಸಂಸ್ಕೃತಿ, ಹಳ್ಳಿ ಜೀವನ ನಶಿಸುತ್ತಿದೆ ಎಂದು ಸಾಹಿತಿ ಹೆಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಘಟಕ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಉತ್ಸವದಲ್ಲಿ ಮುಖ್ಯ ಭಾಷಣಕರರಾಗಿ ಆಗಮಿಸಿ ಅವರು ಮಾತನಾಡಿದರು. ನಾವು ಮತ್ತು ನಮ್ಮ ಹಿರಿಯರ ಬದುಕು, ಜನಪದ ಸಂಸ್ಕøತಿ, ಪದ್ಧತಿ, ಪರಂಪರೆಯಿಂದ ಕೂಡಿದ್ದು, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ತಲೆಮಾರು ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿದೆ. ಆಳುವ ಮಕ್ಕಳನ್ನು ಜೋಗುಳ ಹಾಡಿ ಮಲಗಿಸುವ ಅಥವಾ ಪ್ರೀತಿಯ ಮಾತುಗಳಿಂದ ಒಲಿಸಿಕೊಳ್ಳುವ ಜಾಗದಲ್ಲಿ ಮೊಬೈಲ್ ರಿಲ್ಸ್ ಆಕ್ರಮಿಸಿಕೊಂಡಿದೆ ಎಂದು ವಿಷಾಧಿಸಿದರು. ಹಿಂದೆ ಕೂಡುಕುಟುಂಬ, ಅಜ್ಜ ಅಜ್ಜಿಯ ಪ್ರೀತಿ, ಕುಂಟಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ ಆಟ, ಹಸಿರ ಪಕೃತಿಯ ನಡುವೆ ನಾವು ಬೆಳೆದ ದಿನಗಳು ಇಂದು ನಮ್ಮ ಮತ್ತು ಮೊಮ್ಮಕ್ಕಳಿಗೆ ಮರಿಚಿಕೆಯಾಗಿದೆ ಎಂದು ಹೇಳಿದರು. ವಿವಿಧ ಭಾಷೆ ಜನಾಂಗಗಳಿಗೆ ಸೇರಿದ ನಾವು ಕನ್ನಡವನ್ನು ಹೆಚ್ಚಾಗಿ ಬಳಸುವತ್ತ ಗಮನ ಹರಿಸಬೇಕೆಂದು ಕರೆ ನೀಡಿದರು. ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಸಮಾನರಾಗಿ ಕೆಲಸ ಮಾಡುತ್ತಿದ್ದು, ಸಮಾನತೆಯ ಹಿನ್ನಲೆಯಲ್ಲಿ ಲಭ್ಯವಾದ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಿ ಎಂದು ಫ್ಯಾನ್ಸಿ ಮುತ್ತಣ್ಣ ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ ಜಯಾನಂದ, ನಾವು ಕನ್ನಡ ಭಾಷೆಯನ್ನು ಮಾತನಾಡುವುದರ ಜೋತೆಗೆ ಕನ್ನಡೇತರರನ್ನು ಕನ್ನಡ ಮಾತನಾಡುವಂತೆ ಪ್ರೇರೆಪಿಸಬೇಕು ಮತ್ತು ಕಲಿಸಬೇಕೆಂದು ಕರೆ ನೀಡಿದರು. ಕುಶಾಲನಗರ ತಾಲ್ಲೂಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ.ಎಸ್.ನಾಗೇಶ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕನ್ನಡ ಉಳಿದಿದ್ದು ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡಿದರೆ ಅವಮಾನ ಪರಿಸ್ಥಿತಿ ಇದೆ. ಶಾಲಾ ಮಕ್ಕಳಲ್ಲಿ ಕನ್ನಡ ಭಾಷ ಅಭಿಮಾನ, ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ತಾಲ್ಲೂಕು ಕಸಾಪದ ಸಂಘಟನಾ ಕಾರ್ಯದರ್ಶಿ ದೇವಿಪ್ರಸಾದ್ ಕಾಯರ್‍ಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮತ್ತು ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ಮಾತನಾಡಿದರು. ತಾಲ್ಲೂಕು ಕಸಾಪ ನಿರ್ದೇಶಕ ಬಿ.ಸಿ.ದಿನೇಶ್, ಎಂ.ಎನ್.ಕಾಳಪ್ಪ, ಶ್ರೀನಿವಾಸ್, ತಾಲ್ಲೂಕು ಕಸಾಪ ಖಜಾಂಚಿ ಕೆ.ವಿ.ಉಮೇಶ್, ಶಾಲಾ ಆಡಳಿತ ಮಂಡಳಿ ಖಜಾಂಚಿ ಕಾಳಪ್ಪ, ಸದಸ್ಯೆ ಗೀತಾ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಖ್ಯೋಪಾದ್ಯಾಯನಿ ಕೆ.ತಿಲಕ ಸ್ವಾಗತಿಸಿದರು. ಶಿಕ್ಷಕಿ ಸುನಂದ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಸತ್ಯನಾರಾಯಣ ವಂದಿಸಿದರು. ಶಾಲಾ ಮಕ್ಕಳಿಂದ ಜಾನಪದ ವಸ್ತು ವೈವಿಧ್ಯವುಳ್ಳ ಗೀತಾ ಗಾಯನ ಮತ್ತು ನೃತ್ಯ ಮನ ಸೂರೆಗೊಂಡವು.









