
ಮಡಿಕೇರಿ ಡಿ.1 NEWS DESK : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಇದೇ ಡಿ.5 ರಿಂದ 7 ರವರೆಗೆ ಮಂಡ್ಯದ ಕೃಷಿ ವಿಜ್ಞಾನಗಳ ವಿವಿಯ ವಿ.ಸಿ. ಫಾರಂನಲ್ಲಿ ‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಘೋಷವಾಕ್ಯದಡಿ ‘ಕೃಷಿ ಮೇಳ-2025’ ನಡೆಯಲಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಅರಣ್ಯ ಮಹಾವಿದ್ಯಾಲಯದ ಡೀನ್ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕÀ ಡಾ.ಜಿ.ಎಂ.ದೇವಗಿರಿ ಅವರು ಕೃಷಿ ವಿಶ್ವ ವಿಶ್ವವಿದ್ಯಾಲಯ ವ್ಯಾಪ್ತಿಯ ಕೊಡಗನ್ನು ಒಳಗೊಂಡಂತೆ ಮಂಡ್ಯ, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರ ಅಭಿವೃದ್ಧಿಯ ಚಿಂತನೆಯಡಿ ಕೃಷಿ ಮೇಳವನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಕೃಷಿ ಮೇಳವನ್ನು ಆರಂಭಿಕ ದಿನವಾದ ಡಿ.5ರಂದು ಬೆಳಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗಿನ 10 ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಡಾ.ಜಿ.ಎಂ.ದೇವಗಿರಿ ತಿಳಿಸಿದರು.
ಕೊಡಗನ್ನು ಒಳಗೊಂಡಂತೆ ಕೃಷಿ ವಿವಿಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು ಕೃಷಿ ಪ್ರಧಾನವಾದ ಜಿಲ್ಲೆಗಳೇ ಆಗಿವೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಕುಂಠಿತಗೊಳ್ಳುತ್ತಿದೆ. ಈ ಹಿನ್ನೆಲೆ ಭತ್ತ ಸೇರಿದಂತೆ ವಿವಿಧ ಕೃಷಿಗಳನ್ನು ತಾಂತ್ರಿಕತೆಯೊಂದಿಗೆ ಆಧುನಿಕ ವಿಧಾನಗಳನ್ನು ಬಳಸಿಕೊಂಡು ಹೇಗೆ ಲಾಭದಾಯಕವ್ನಾಗಿ ಮಾಡಿಕೊಳ್ಳಬಹುದೆನ್ನುವ ಬಗ್ಗೆ ಕೃಷಿ ಮೇಳದಲ್ಲಿ, ತಾಂತ್ರಿಕ ಅಧಿವೇಶನ, ರೈತರೊಂದಿಗಿನ ಸಂವಾದ ಮೊದಲಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆಯೆಂದು ತಿಳಿಸಿದರು. *ಬಸ್ ವ್ಯವಸ್ಥೆ* ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ರೈತರ ಅನುಕೂಲಕ್ಕಾಗಿ ಕೊಡಗಿನಿಂದ 10 ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ವ್ಯವಸ್ಥೆ ಡಿ.5 ಕ್ಕೆ ಲಭ್ಯವಿರುತ್ತದೆ. ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮಡಿಕೇರಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕರಾದ ಡಾ.ಹೆಚ್.ಸಿ.ಲತಾ ಮೊ.8884525995 ಮತ್ತು ಪೊನ್ನಂಪೇಟೆ ಕ್ಷೇತ್ರ ಅಧೀಕ್ಷರಾದ ಡಾ. ಪ್ರಶಾಂತ್ ಮೊ.7892593258ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇಲ್ಲಿಯವರೆಗೆ 45 ಭತ್ತದ ತಳಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಕೊಡಗಿನ ವಾತಾವರಣಕ್ಕೆ ಒಗ್ಗಿಕೊಳ್ಳುವ, ಬೆಂಕಿ ರೋಗ ನಿರೋಧಕತೆಯನ್ನು ಒಳಗೊಂಡ, ಅಧಿಕ ಇಳುವರಿಯ ‘ತುಂಗಾ’, ಕೆಪಿಆರ್-1 ಮತ್ತು ಕೆಪಿಆರ್-2 ಎನ್ನುವ ಮೂರು ಹೊಸ ತಳಿಗಳನ್ನು ಪರಿಚಯಿಸಿದೆ ಎಂದು ಡಾ.ದೇವಗಿರಿ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಅಧೀಕ್ಷಕರುಗಳಾದ ಮಡಿಕೇರಿಯ ಡಾ.ಹೆಚ್.ಸಿ.ಲತಾ ಹಾಗೂ ಪೊನ್ನಂಪೇಟೆಯ ಕ್ಷೇತ್ರ ಅಧೀಕ್ಷಕ ಡಾ.ಪ್ರಶಾಂತ್ ಉಪಸ್ಥಿತರಿದ್ದರು.









