


ಮಡಿಕೇರಿ ಡಿ.4 NEWS DESK : ವಿರಾಜಪೇಟೆ ಬಾರ್ ಅಸೋಸಿಯೇಷನ್ ವತಿಯಿಂದ ವಕೀಲರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೆರಂಬಾಡಿಯ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಸಮಾಜದಲ್ಲಿ ವಕೀಲ ವೃತ್ತಿಯು ಅತ್ಯಂತ ಪವಿತ್ರ ಹಾಗೂ ವಿಶ್ವಾಸನೀಯವಾದುದಾಗಿದೆ. ನಿಮ್ಮಲ್ಲಿಗೆ ಬರುವ ನಿಮ್ಮ ಕಕ್ಷಿದಾರರ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನ್ಯಾಯ ಕೊಡಿಸಲು ಸಕಲ ಪ್ರಯತ್ನ ಮಾಡುವುದೇ ವಕೀಲರ ಆದ್ಯ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು. ಎಲ್ಲಕ್ಕಿಂತ ಮಿಗಿಲಾಗಿ ನಾವೆಲ್ಲರೂ ಸಂವಿಧಾನಕ್ಕೆ ತಲೆಬಾಗಬೇಕು. ಇಂದಿನ ದಿನದಲ್ಲಿ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸ ವಕೀಲರು ಮಾಡಬೇಕಾಗಿದೆ. ದೇಶದ ಭದ್ರತೆ, ದೇಶದ ಏಳಿಗೆ ಹಾಗೂ ದೇಶದ ಜನರ ಬದುಕಿಗೆ ದಾರಿದೀಪ ಆಗುವ ಕೆಲಸ ವಕೀಲರ ಪಾಲಿಗೆ ಲಭಿಸುತ್ತದೆ. ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು ತಮ್ಮನ್ನು ನಂಬಿದ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವುದೇ ವಕೀಲ ವೃತ್ತಿಯ ಪರಮಧರ್ಮ ಆಗಿರಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನ್ಯಾಯಧಿಶರಾದ ನಟರಾಜ್, ಮಂಜುನಾಥ್, ಪ್ರದೀಪ್ ಪೊತದರ್, ವಿರಾಜಪೇಟೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ಪೂವಣ್ಣ, ವಕೀಲರಾದ ನರೇಂದ್ರ ಕಾಮತ್, ಸೋಮಣ್ಣ ಬಿ.ಎ, ವಕೀಲರಾದ ಸದಸ್ಯರು ಸಿ.ಕೆ.ಪೊನ್ನಣ್ಣ, ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರು, ಉಪಸ್ಥಿತರಿದ್ದರು.









