ಚೆಟ್ಟಳ್ಳಿ ಡಿ.6 NEWS DESK : ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮತ್ತು ಅಧಿಕ ಮೌಲ್ಯದ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ವತಿಯಿಂದ ಆಫ್ ಸೀಸನ್ ಲಿಚ್ಚಿ ಬೆಳೆಯಲ್ಲಿನ ಸವಾಲುಗಳು ಮತ್ತು ಭವಿಷ್ಯದ ನಿರೀಕ್ಷೆಗಳು ಕುರಿತು ವಿಚಾರ ಮಂಥನ ಕಾರ್ಯಕ್ರಮ ಚೆಟ್ಟಳ್ಳಿಯಲ್ಲಿ ನಡೆಯಿತು. ಭವಿಷ್ಯದಲ್ಲಿ ಹೆಚ್ಚು ಬೇಡಿಕೆ ಇರುವ ಲಿಚ್ಚಿ ಹಣ್ಣನ್ನು ಬೆಳೆದು ಅಧಿಕ ಲಾಭ ಗಳಿಸುವಂತೆ ಸಂಪನ್ಮೂಲ ವ್ಯಕ್ತಿಗಳು ಬೆಳೆಗಾರರಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಹಾರ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಅಜಯ್ ಕುಮಾರ್ ಸಿಂಗ್ ಅವರು ಲಿಚ್ಚಿ ಬೆಳೆಗೆ ಯೋಗ್ಯವಾದ ಪ್ರದೇಶದಲ್ಲಿ ಈ ಹಣ್ಣಿನ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಭಾರತೀಯ ಕೃಷಿ ವಿಶ್ವ ವಿದ್ಯಾನಿಲಯ ಲಿಚ್ಚಿ ಕೃಷಿ ಕುರಿತು ಸಂಶೋಧನೆ ನಡೆಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಆಫ್ ಸೀಸನ್ ಲಿಚ್ಚಿ ಬೆಳೆಯುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಲಿಚ್ಚಿ ಕೃಷಿಕರ ಬೇಡಿಕೆಗೆ ತಕ್ಕಂತೆ ಕೇಂದ್ರದಿಂದ ತಳಿಗಳನ್ನು ವಿತರಿಸಲಾಗುತ್ತಿದೆ ಎಂದರು. ರಾಷ್ಟ್ರೀಯ ಲಿಚ್ಚಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿಕಾಸ್ ದಾಸ್ ಅವರು ಮಾತನಾಡಿ ಬಿಹಾರ, ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಲಿಚ್ಚಿಯನ್ನು ಬೆಳೆಯಲಾಗುತ್ತಿದೆ. ಕೊಡಗಿನ ಆಫ್ ಸೀಸನ್ ಲಿಚ್ಚಿ ಕೃಷಿ ವಲಯದ ಗಮನ ಸೆಳೆಯುತ್ತಿದೆ. ಐದು ವರ್ಷಗಳ ಯೋಜನೆಯ ಮೂಲಕ ಲಿಚ್ಚಿ ಹಣ್ಣಿನ ಪ್ರಗತಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು. ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಗೌರವ ಕಾರ್ಯದರ್ಶಿ ಹಾಗೂ ಹಿರಿಯ ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಅವರು ಮಾತನಾಡಿ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಉತ್ತಮ ಕಾರ್ಯವನ್ನು ಮಾಡುತ್ತಿದೆ. ಕೃಷಿಕರಿಗೆ ಉತ್ತಮ ತಳಿ ಮತ್ತು ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಸಂಘದ ಸದಸ್ಯರಾಗುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸುವಂತೆ ಮನವಿ ಮಾಡಿದರು. ಭಾರತೀಯ ತೊಟಗಾರೀಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಟಿ.ಕೆ.ಬೆಹರಾ ಅವರು ಮಾತನಾಡಿ ವಿವಿಧ ಹಣ್ಣು, ತರಕಾರಿಗಳನ್ನು ಬೆಳೆಸಲು ಪಶ್ಚಿಮಘಟ್ಟ ವ್ಯಾಪ್ತಿಯ ಕೊಡಗು ಸೂಕ್ತ ಪ್ರದೇಶವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಕೃಷಿಕರಿದ್ದಾರೆ. ಲಿಚ್ಚಿ ಮತ್ತು ರಾಂಬೂಟಾನ್ ಹಣ್ಣಿನ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಬೇಕೆಂದರು. ಕಾರ್ಯಕ್ರಮದಲ್ಲಿ ‘ಆಫ್ ಸೀಸನ್ ಲಿಚ್ಚಿ ಬೆಳೆಯ ಸವಾಲುಗಳು ಮತ್ತು ಅವುಗಳ ನಿರ್ವಹಣೆ’ ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. *ಸನ್ಮಾನ* ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಲಿಚ್ಚಿ ಹಣ್ಣನ್ನು ಬೆಳೆಯುವ ಪಾಲಿಬೆಟ್ಟದ ಬೆಳೆಗಾರ ಅಚ್ಚಯ್ಯ ಹಾಗೂ ಮಾದಾಪುರದ ವಿನಲ್ ಸೋಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಣ್ಣುಗಳ ಯೋಜನಾ ಸಂಯೋಜಕ ಡಾ.ಪ್ರಕಾಶ್ ಪಾಟೀಲ್ ಸ್ವಾಗತಿಸಿ ಡಾ.ರಾಣಿ ಎ.ಟಿ ನಿರೂಪಿಸಿದರು. ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಡಾ.ಮುರುಳೀಧರನ್ ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವೀರೇಂದ್ರಕುಮಾರ್, ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಮುಖ್ಯಸ್ಥ ಡಾ.ನಡಾಫ್, ವಿವಿಧ ಕೃಷಿ, ತೋಟಗಾರಿಕಾ ಇಲಾಖೆಯ ತಜ್ಞರು, ಸಿಬ್ಬಂದಿಗಳು, ಕೊಡಗು, ಕೇರಳ, ಹಾಸನ, ಸಕಲೇಶಪುರ ಮತ್ತು ಮೈಸೂರು ಭಾಗದ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಿಚ್ಚಿ ಕೃಷಿಯ ಪ್ರಾಯೋಗಿಕ ಮಾಹಿತಿ ಪಡೆದರು.
*ಚಿತ್ರ ವರದಿ : ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ*

ಪುತ್ತರಿರ ಕರುಣ್ ಕಾಳಯ್ಯ








