
ಮಡಿಕೇರಿ ಡಿ.6 NEWS DESK : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ, ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.11 ರಂದು ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಎಂ.ಎ.ಅಪ್ಪಯ್ಯ ಅವರು ಬೆಳಗ್ಗೆ 10.30 ಗಂಟೆಗೆ ವಾರ್ಷಿಕ ಮಹಾಸಭೆಯನ್ನು ನಿವೃತ್ತ ಡಿಜಿಪಿ ಡಾ.ಎಂ.ಎ.ಗಣಪತಿ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎನ್.ಮಾದಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. *ಮೂವರಿಗೆ ಸನ್ಮಾನ* ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್, ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಹೆಚ್ಚವರಿ ವರಿಷ್ಠಾಧಿಕಾರಿಗಳಾದ ಬಿ.ಕೆ.ದಿನೇಶ್ ಮತ್ತು ಪೊಲೀಸ್ ಅಧಿಕಾರಿ ಎಂ.ಕೆ.ತಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಮಾಹಿತಿಯನ್ನಿತ್ತರು. *ಪ್ರತಿಭಾ ಪುರಸ್ಕಾರ* ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರಿ ಬಿದರಿ ಅವರು ಮಣವಟ್ಟೀರ ಪೊನ್ನಪ್ಪ ಅವರ ಸ್ಮರಣಾರ್ಥ ನೀಡಿರುವ ದತ್ತಿಯಡಿ ಕೆಎಸ್‍ಆರ್‍ಪಿ ನಿವೃತ್ತ ಸಿಬ್ಬಂದಿಗಳ ಮಕ್ಕಳಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಯನ್ನು ಪುರಸ್ಕರಿಸಲಾಗುತ್ತದೆ. ಇದೇ ರೀತಿ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಿದ ಸಿವಿಲ್ ಮತ್ತು ಡಿಎಆರ್‍ನ ನಿವೃತ್ತ ಪೊಲೀಸರ ಮಕ್ಕಳ ಪೈಕಿ ಒಬ್ಬರನ್ನು ಪುರಸ್ಕರಿಸಲಾಗುತ್ತದೆ. *ನೆರವು ಹೆಚ್ಚಳ* ಸಂಘದ ಅಧ್ಯಕ್ಷ ಕೆ.ಎನ್.ಮಾದಯ್ಯ ಅವರು ಮಾತನಾಡಿ, ನಿವೃತ್ತ ಪೊಲೀಸರಿಗೆ ಇರುವ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸಾ ವೆಚ್ಚದ ನೆರವನ್ನು 1.50 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹಾಗೂ ಶಸ್ತ್ರ ಚಿಕಿತ್ಸೆಗಳಿಗೆ ಲಭ್ಯವಿದ್ದ 2 ಲಕ್ಷ ರೂ. ನೆರವನ್ನು 3 ಲಕ್ಷಗಳಿಗೆ ಹೆಚ್ಚಿಸಲಾಗಿದೆ ಎಂದರು. ಪ್ರಸ್ತುತ ನಿಯಮಗಳಂತೆ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಿ ಮೂರು ತಿಂಗಳ ಒಳಗಾಗಿ ಆರೋಗ್ಯ ಭಾಗ್ಯ ಸೌಲಭ್ಯಕ್ಕೆ ನೋಂದಣಿಯಾಗಬೇಕಾಗಿದೆ. ಈ ಯೋಜನೆ ಮತ್ತು ಅದರ ಸೌಲಭ್ಯಗಳ ಬಗ್ಗೆ ನಿವೃತ್ತ ಪೊಲೀಸರಿಗೆ ಹೆಚ್ಚಿನ ಮಾಹಿತಿ ಮತ್ತು ಅರಿವಿಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತ ಪೊಲೀಸರಿಗೆ ಮಾಹಿತಿಯನ್ನು ಸಭೆಯಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಸಿ.ಎನ್.ಅಪ್ಪಯ್ಯ ಅವರು ಮಾತನಾಡಿ, ಸಂಘದಲ್ಲಿ ಪ್ರಸ್ತುತ 1018 ಸದಸ್ಯರಿದ್ದು, ಇವರಲ್ಲಿ 369 ಮಂದಿ ಮಾತ್ರ ಆರೋಗ್ಯ ಭಾಗ್ಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ನಿವೃತ್ತರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಕೆ.ಕಾವೇರಪ್ಪ ಹಾಗೂ ಖಜಾಂಚಿ ಡಿ.ಟಿ.ಬಿದ್ದಪ್ಪ ಉಪಸ್ಥಿತರಿದ್ದರು.









