
ಕೊಚ್ಚಿ NEWS DESK ಡಿ.20 : ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಶ್ರೀನಿವಾಸನ್ (69) ಅವರು ಇಂದು ನಿಧನರಾಗಿದ್ದಾರೆ. ಶ್ರೀನಿವಾಸನ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದ ಹಿನ್ನೆಲೆ ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಉದಯಂಪೀರೂರಿನ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು ಐದು ದಶಕಗಳ ಕಾಲ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶ್ರೀನಿವಾಸನ್ ಅವರು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ನಟನಾಗಿ ಖ್ಯಾತಿ ಗಳಿಸಿದ್ದರು. ಕೇರಳದ ತಲಶ್ಶೇರಿ ಬಳಿಯ ಪಟ್ಯಂನಲ್ಲಿ 1956ರ ಏಪ್ರಿಲ್ 6 ರಂದು ಜನಿಸಿದ ಶ್ರೀನಿವಾಸನ್, ಕದಿರೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1977ರಲ್ಲಿ ಪಿ.ಎ. ಬ್ಯಾಕರ್ ಅವರ ‘ಮಣಿಮುಳಕ್ಕಂ’ ಚಿತ್ರದ ಮೂಲಕ ಶ್ರೀನಿವಾಸನ್ ನಟನೆ ಆರಂಭಿಸಿದರು.








