

ಮಡಿಕೇರಿ NEWS DESK ಡಿ.25 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಕಾಳು ಮೆಣಸು ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸೂಚನೆ ನೀಡಿದ್ದಾರೆ. ಕೊಯ್ಲು ಮಾಡಿರುವ ಕಾಫಿ ಮತ್ತು ಕಾಳು ಮೆಣಸನ್ನು ಸಂಗ್ರಹ ಮಾಡಿರುವ ಸ್ಥಳಗಳಿಂದ ಕಳವು ಮಾಡಿರುವ ಕುರಿತು ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರ ಮಾಡುವವರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಹಾಗೂ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವಂತೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ವ್ಯಾಪಾರಸ್ಥರು ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ಸಂದರ್ಭ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿ (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ. ವಹಿವಾಟಿನ ವಿವರ ತೂಕ ಮತ್ತು ಮೊತ್ತ) ಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಬೆಳೆ ಖರೀದಿ ಸಂದರ್ಭ ಸಂಶಯ ವ್ಯಕ್ತವಾದಲ್ಲಿ ಅಂತಹ ವ್ಯಕ್ತಿಗಳ ಭಾವಚಿತ್ರವನ್ನು ತೆಗೆದುಕೊಳ್ಳಬೇಕು ಹಾಗೂ ಮಾರಾಟಗಾರರ ಹಿನ್ನೆಲೆ ಪರಿಶೀಲಿಸಿ ಎಚ್ಚರಿಕೆಯಿಂದ ವ್ಯವಹರಿಸಬೇಕು. ಮಾರಾಟ ಮತ್ತು ಖರೀದಿ ಸಂದರ್ಭ ಯಾವುದೇ ರೀತಿಯ ಅನುಮಾನ ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ವ್ಯಾಪಾರಸ್ಥರ ಪರಿಶೀಲನೆ ಸಂದರ್ಭ ದಾಖಲಾತಿಗಳನ್ನು ನಿರ್ವಹಿಸದಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಜಿಎಸ್‌ಟಿ ಇಲಾಖೆಗೆ ಮಾಹಿತಿ ನೀಡಲಾಗುವುದು. ಯಾವುದೇ ದಾಖಲಾತಿ ನಿರ್ವಹಿಸದೇ ವ್ಯವಹರಿಸಿದರೆ ಉದ್ದೇಶಪೂರ್ವಕವಾಗಿ ಕಳವು ಮಾಲನ್ನು ಕಡಿಮೆ ಬೆಲೆಯಲ್ಲಿ ಪಡೆದಿರುವುದಾಗಿ ಪರಿಗಣಿಸಿ ನ್ಯಾಯಾಲಯ 3 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆಗಳಿರುತ್ತದೆ ಎಂದು ಎಸ್‌ಪಿ ಕೆ.ರಾಮರಾಜನ್ ತಿಳಿಸಿದ್ದಾರೆ. ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರು ವ್ಯಾಪಾರ ನಡೆಸುವ ಸಂದರ್ಭ ಮಾರಾಟ ಹಾಗೂ ಖರೀದಿದಾರರ ಕುರಿತು ಸಂಶಯ ಕಂಡು ಬಂದಲ್ಲಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ಒದಗಿಸಿದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಸ್‌ಪಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.








