
ಮಡಿಕೇರಿ NEWS DESK ಜು.29 : ಸಮಾಜ ಸೇವಕ ಹಾಗೂ ಕಾರ್ಮಿಕ ಮುಖಂಡ ನಾಪಂಡ ಮುತ್ತಪ್ಪ ಅವರಿಗೆ ಕೊಡಗು ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂದು ಯುನೈಟೆಡ್ ಪ್ಲಾಂಟೇಷನ್ ವಕರ‍್ಸ್ ಯೂನಿಯನ್ (ಎಐಟಿಯುಸಿ) ನ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಅನೇಕ ವರ್ಷಗಳಿಂದ ಕಾರ್ಮಿಕ ವರ್ಗದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿರುವ ನಾಪಂಡ ಮುತ್ತಪ್ಪ ಅವರು ಜಿಲ್ಲಾಧ್ಯಕ್ಷರಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟರ ಏಳಿಗೆಯನ್ನು ಸದಾ ಬಯಸುವ, ಸಾಮಾಜಿಕ ಕಳಕಳಿಯೊಂದಿಗೆ ನೊಂದವರಿಗಾಗಿ ಸದಾ ಮಿಡಿಯುವ ಮತ್ತು ಹೋರಾಟದ ಮನೋಭಾವವನ್ನು ಹೊಂದಿರುವ ಮುತ್ತಪ್ಪ ಅವರು ಸರ್ವ ಜನಾಂಗದ ಪ್ರೀತಿಯ ನಾಯಕರಾಗಿದ್ದಾರೆ. ಜಾತಿ ಮತ ಭೇದವಿಲ್ಲದೆ ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ಜನಸ್ನೇಹಿಯಾಗಿರುವ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದರೆ ಪಕ್ಷ ಸಂಘಟನೆಗೆ ಮಾತ್ರವಲ್ಲದೆ ಜನಸೇವೆಗೆ ಮತ್ತಷ್ಟು ಶಕ್ತಿ ತುಂಬಿದoತ್ತಾಗುತ್ತದೆ. ಅಲ್ಲದೆ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಲಿದೆ. ಕಾಂಗ್ರೆಸ್ ಕಾರ್ಮಿಕ ಘಟಕದ ಮುಖಂಡರಾಗಿ ರಾಜ್ಯ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ರಾಷ್ಟ್ರ ಹಾಗೂ ರಾಜ್ಯ ನಾಯಕರ ಮೆಚ್ಚುಗೆಗೆ ಪಾತ್ರರಾಗಿರುವ ನಾಪಂಡ ಮುತ್ತಪ್ಪ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯೂ ಆಗಿದೆ ಎಂದು ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ.









